ಹುಬ್ಬಳ್ಳಿ: ಬ್ಯಾಂಕ್ ದರೋಡೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಎಪಿಎಂಸಿ ನವನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಪನಕೊಪ್ಪದ ನಿವಾಸಿ ಮಂಜುನಾಥ ಹಬೀಬ್ (28) ಬಂಧಿತ ಆರೋಪಿಯಾಗಿದ್ದು, ಈತ ಗುರುವಾರ ಸಂಜೆ ಅಮರಗೋಳದ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬ್ಯಾಂಕ್ ಸಿಬ್ಬಂದಿಯ ಕುತ್ತಿಗೆಗೆ ಚಾಕು ಹಿಡಿದು 10ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಡುವಂತೆ ಜೀವ ಬೆದರಿಕೆ ಹಾಕಿದ್ದನು. ಬಳಿಕ ಬ್ಯಾಂಕ್ ಸಿಬ್ಬಂದಿ ಚಾಣಾಕ್ಷದಿಂದ ಆರೋಪಿಯನ್ನು ತಳ್ಳಿ ಪ್ರಾಣಾಪಾಯದಿಂದ ಪಾರಾಗಿದ್ದನು.
ಈ ಕುರಿತು ಎಪಿಎಂಸಿ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತದನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಕೈಗೆತ್ತಿಕೊಂಡ ಎಪಿಎಂಸಿ ನವನಗರದ ಪೊಲೀಸ್ ಠಾಣೆಯ ಪಿಐ ಸಮಿಮುಲ್ಲಾ ಮುತ್ತುವರ ಒಂದು ತಂಡವನ್ನು ರಚಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಚಾಕು ಹಾಗೂ ಒಂದು ಬ್ಯಾಗ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ಸುಲಿಗೆ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ನವನಗರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.