ಚಿಕ್ಕಮಗಳೂರು : ಸಿಎಂ ಸಿದ್ದರಾಮಯ್ಯ ಅವರ ಮುಂದೆ ಆರು ನಕ್ಸಲ್​ರು ಶರಣಾಗಿದ್ದರು. ಈ ವೇಳೆ ಶರಣಾಗದೆ ಉಳಿದಿದ್ದ ನಕ್ಸಲ್ ರವೀಂದ್ರ ಅವರು ಇಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರನ ಜತೆ ಮಾತುಕತೆ ನಡೆಸಿ ಮನವೊಲಿಸಿದ್ದು, ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹಾಗೂ ಎಸ್​ಪಿ ವಿಕ್ರಮ್ ಆಮ್ಟೆ ಅವರ‌ ಮುಂದೆ ಶರಣಾದರು.

ಕಳೆದ‌ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್​ ರವೀಂದ್ರ ಅವರ ವಿರುದ್ಧ ಒಟ್ಟು 26 ಪ್ರಕರಣಗಳಿವೆ. ನಕ್ಸಲ್​ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ, 18 ವರ್ಷಗಳಿಂದ ನಕ್ಸಲ್​​ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್​ರ ನಾಯಕ ವಿಕ್ರಮ್ ಗೌಡ ಎನ್​ಕೌಂಟರ್​ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು.

ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *