ಬೆಂಗಳೂರು : ಮನಪರಿವರ್ತನೆಯೊಂದಿಗೆ ನಕ್ಸಲೀಯರು ಶರಣಾಗುವ ಭರವಸೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಕ್ಸಲರ ಶರಣಾಗತಿಯನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ನಕ್ಸಲರಿಗೆ ಶರಣಾಗುವಂತೆ ಕರೆ ನೀಡಿದ್ದು, ಮನ ಪರಿವರ್ತನೆ ಮೂಲಕ ಶರಣಾಗುವ ಸಾಧ್ಯತೆ ಇದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ ಗುಡ್ಡಗಾಡು ಮತ್ತು ಕರಾವಳಿ ಪ್ರದೇಶದ ಪಶ್ಚಿಮ ಘಟ್ಟಗಳ ದಟ್ಟ ಕಾಡಿನಲ್ಲಿ ಹಿಂಸಾತ್ಮಾಕ ಹೋರಾಟದಲ್ಲಿ ತೊಡಗಿರುವ ಮೋಸ್ಟ್ ವಾಂಟೆಡ್ ನಕ್ಸಲೀಯರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮನವಿ ಮೇರೆಗೆ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ನಿರ್ಧರಿಸಿದ್ದಾರೆ.
ವಿಕ್ರಮ್ ಗೌಡ ಎನ್‌ಕೌಂಟರ್ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ಕರ್ನಾಟಕ ಪೊಲೀಸರ ನಿರಂತರ ಕೂಂಬಿಂಗ್ ಕಾರ್ಯಾಚರಣೆಯ ನಂತರ ನಕ್ಸಲೀಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ತುಂಗಾ ನಕ್ಸಲ್ ವಿಭಾಗದ ಮುಖ್ಯಸ್ಥರಾಗಿರುವ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ ಮತ್ತು ಜೀಶಾ ಅವರಂತಹ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಮಾವೋವಾದಿಗಳು; ಆಂಧ್ರಪ್ರದೇಶದ ಕೆ.ವಸಂತ ಮತ್ತು ಮರೆಪ್ಪ ಅರೋಲಿ ಶರಣಾಗಲು ನಿರ್ಧರಿಸಿ ಶಸ್ತ್ರ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಂದರಿ ಶಸಾಸ್ತ್ರ ತ್ಯಜಿಸಿ ಮನೆಗೆ ಮರಳುವುದಾದರೆ ಮನೆಯವರು ಸ್ವಾಗತಿಸುವುದಾಗಿ ಈ ಹಿಂದೆ ನಕ್ಸಲ್ ಆಗಿದ್ದ ಮಾವೋವಾದಿ ನಾಯಕಿ ಸುಂದರಿಯ ಸಹೋದರ ಆನಂದ್ ಹೇಳಿದ್ದಾರೆ. ಸುಂದರಿ ಮತ್ತು ಆಕೆಯ ಸಹಚರರು ಹೋರಾಟವನ್ನು ನಿಲ್ಲಿಸಿ ಸಾಮಾನ್ಯ ಜನರಂತೆ ಬದುಕಲಿ. ಆಕೆ ಮನೆ ಬಿಟ್ಟು ಹೋಗಿ 17 ವರ್ಷಗಳಾಗಿವೆ. ಆಕೆ ಸರ್ಕಾರದ ಮುಂದೆ ಶರಣಾಗಿ ನಮ್ಮ ಬಳಿಗೆ ಬಂದರೆ ನಮಗೆ ಸಂತೋಷವಾಗುತ್ತದೆ ಎಂದು ಅವರು ಮಂಗಳೂರು ಜಿಲ್ಲೆಯ ಕುತ್ಲೂರಿನಲ್ಲಿ ಮನವಿ ಮಾಡಿದರು. ಎರಡು ಮೂರು ದಿನಗಳಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಸಿಎಂ ಪ್ರಸ್ತಾವನೆಯನ್ನು ಸ್ವಾಗತಿಸಿದ್ದು, ಅಧಿಕಾರಿಗಳು ಶರಣಾಗತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಸಿರು ನಿಶಾನೆ ತೋರಿದ್ದಾರೆ. ಶರಣಾಗತಿ ಪ್ರಕ್ರಿಯೆ ಗೌರವಯುತವಾಗಿ ನಡೆಯಬೇಕು ಹಾಗೂ ಆತ್ಮಗೌರವಕ್ಕೆ ಧಕ್ಕೆಯಾಗಬಾರದು ಎಂದು ನಕ್ಸಲೀಯರು ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ನಕ್ಸಲೀಯರನ್ನು ಜೈಲುಗಳಲ್ಲಿ ಕೊಳೆಯುವಂತೆ ಮಾಡಬಾರದು. ಅವರ ಮೇಲಿರುವ ‘ಸುಳ್ಳು’ ಪ್ರಕರಣಗಳನ್ನು ಮುಚ್ಚಿ, ಶರಣಾದ ನಂತರ ಜಾಮೀನು ಪಡೆಯಲು ಅವರಿಗೆ ಸಹಕಾರ ನೀಡಬೇಕು. ಎಲ್ಲಾ ಪ್ರಕರಣಗಳನ್ನು ಒಂದೇ ನ್ಯಾಯಾಲಯದ ಅಡಿಯಲ್ಲಿ ತರಬೇಕು ಮತ್ತು ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ.