ಬೆಂಗಳೂರು : ಯೋಗ, ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆ ಸೇರಿದಂತೆ ಮುಂತಾದ ಸಾಂಪ್ರದಾಯಿಕ ಆರೋಗ್ಯ ಚಿಕಿತ್ಸಾ ಪದ್ಧತಿಗಳನ್ನು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಸಂಯೋಜಿಸುವ ಹೊಸ ಆರೋಗ್ಯ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಘೋಷಿಸಿದರು.
ಎಸ್-ವ್ಯಾಸ ವಿಶ್ವವಿದ್ಯಾಲಯ ಮೈಸೂರು ರಸ್ತೆಯ ಸತ್ವ ಗ್ಲೋಬಲ್ ಸಿಟಿಯಲ್ಲಿ ಆರಂಭಿಸಿರುವ ನೂತನ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ಕೈಗಾರಿಕೆ ಮತ್ತು ಶಿಕ್ಷಣದ ಸಭೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನವನ್ನು ನಾವು ಮುಖ್ಯವಾಹಿನಿಗೆ ತರುವ ಅಗತ್ಯವಿದೆ. ಆರೋಗ್ಯಯುತ ಮನಸ್ಸು ಮತ್ತು ದೇಹ ಕಾಪಾಡಿಕೊಳ್ಳದೇ ಇದ್ದರೆ, ಸಂತೋಷದ ಜೀವನ ನಡೆಸಲು ಸಾಧ್ಯವಿಲ್ಲ. ನಾವು ಹಳೇ ಚಿಕಿತ್ಸಾ ಪದ್ಧತಿ ಎಂದು ಯೋಗವನ್ನು ಮರೆಯುತ್ತಿದ್ದೇವೆ. ಆದರೆ, ಇಂದು ನಾವು ಯೋಗವನ್ನು ಮುನ್ನೆಲೆಗೆ ತರಬೇಕಿದೆ. ದೇಶದಲ್ಲಿ ಆರಂಭಿಸಲಾಗುತ್ತಿರುವ 22 ಏಮ್ಸ್ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗವನ್ನು ಸ್ಥಾಪಿಸುತ್ತೇವೆ. ಇದರಲ್ಲಿ ಆಧುನಿಕ ಚಿಕಿತ್ಸೆ ಮತ್ತು ಆಯುಷ್ ಚಿಕಿತ್ಸೆ ಎರಡನ್ನೂ ಸಮೀಕರಿಸಲಾಗುತ್ತದೆ. ಆಯುಷ್ ವೈದ್ಯರು ಅಲೋಪಥಿಗೆ ಮತ್ತು ಆಲೋಪಥಿ ವೈದ್ಯರು ಆಯುಷ್ ಪದ್ಧತಿಗೆ ರೋಗಿಯನ್ನು ಒಳಪಡಿಸುವ ಸೌಲಭ್ಯ ಕಲ್ಪಿಸುತ್ತೇವೆಂದು ಹೇಳಿದರು.
ಆಯುಷ್ ಈಗ ಸಾಂಪ್ರದಾಯಿಕ ಔಷಧಕ್ಕೆ ಮಾತ್ರ ಸೀಮಿತವಾಗಿಲ್ಲ. ಆಧುನಿಕ ವಿಜ್ಞಾನದ ಜೊತೆಗೆ ಮುಂದುವರಿಯುತ್ತಿದೆ. ಆಯುಷ್ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆಯುಷ್ ಸಚಿವಾಲಯವು 103 ದೇಶಗಳ ಜತೆ ಸಹಭಾಗಿತ್ವ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಗುಜರಾತ್‌ನ ಜಾಮ್ ನಗರದಲ್ಲಿ ಸ್ಥಾಪಿಸಲಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಹೊಸ ಆರೋಗ್ಯ ನೀತಿ ಜಾರಿಗೆ ತರಲಾಗುತ್ತಿದ್ದು, 600 ಹಾಸಿಗೆ ಆರೋಗ್ಯ ಧಾಮ್ ಮತ್ತು ದೇಶದ ವಿವಿಧೆಡೆ ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಮನುಷ್ಯನ ಮನಸ್ಸು, ದೇಹ ಆರೋಗ್ಯದಿಂದ ಇರಬೇಕು. ಒತ್ತಡ ನಿವಾರಣೆಗೆ ಯೋಗ ಸಹಕಾರಿ. ವಿದ್ಯಾರ್ಥಿಗಳಿಗೆ ಯೋಗ ಮುಖ್ಯ. ಕ್ರೀಡೆ, ಶಿಕ್ಷಣ ಅಥವಾ ಯಾವುದೇ ಕ್ಷೇತ್ರದಲ್ಲಿ ಮನುಷ್ಯನ ಯಶಸ್ಸಿನಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.