ಶಿವಮೊಗ್ಗ : ಹೊಸ ವರ್ಷದ ಹಿನ್ನೆಲೆ, ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಜ.1 ರಿಂದ ಮಾ.15 ರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಇದೀಗ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಪ್ರವಾಸಿಗರು ಜೋಗಕ್ಕೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

ಮುಖ್ಯ ರಸ್ತೆಯ ವೀವ್ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬಯಿ ಬಂಗಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರೆ ಸ್ಥಳಗಳಿಂದ ಪ್ರವಾಸಿಗರು ಜಲಪಾತದ ಸೊಬಗು ಕಣ್ತುಂಬಿಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜೋಗ ಜಲಪಾತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಲಪಾತ ವೀಕ್ಷಿಸಲು ತೆರಳುವ ಮುಖ್ಯ ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದರಿಂದಾಗಿ 3 ತಿಂಗಳ ಕಾಲ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *