ಪಕ್ಷದ ತೀರ್ಮಾನ ವಿರುದ್ಧ ಬಂಡಾಯ ಘೋಷಿಸಿದ್ದ ಸಿಎಂ ಇಬ್ರಾಹಿಂ ಅವರನ್ನು ಗೌರವಯುತವಾಗಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ, ಪಕ್ಷದಿಂದಲೇ ಹೊರಗೆ ಹಾಕಲಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಡಿ. ಕುಮಾರಸ್ವಾಮಿ ನೇಮಕ ಮಾಡಲಾಗಿದೆ ಎಂದರು.
ಚುನಾವಣೆ ನಡೆದು 4 ತಿಂಗಳು ಆಗಿದೆ. ಸಿಎಂ ಇಬ್ರಾಹಿಂ ಅವರ ಹೇಳಿಕೆಗಳನ್ನು ತಾನು ಪ್ರಸ್ತಾಪ ಮಾಡಲು ಹೋಗುವುದಿಲ್ಲ. ಅವಶ್ಯಕತೆ ಇಲ್ಲ. ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.