ಬಳ್ಳಾರಿ : ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿಗಳು ತಮಗೆ ಅವಮಾನ ಮಾಡಿದ್ದಾರೆಂದು ಬೇಸರಗೊಂಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಮನವೊಲಿಕೆಗೆ ಹೈಕಮಾಂಡ್ ಮುಂದಾಗಿದೆ.
ಈ ಸಭೆಯಲ್ಲಿ ತಮಗಾದ ಅವಮಾನದ ವಿರುದ್ಧ ಸಿಡಿದೆದ್ದು, ಬೇಕಿದ್ದರೆ ಪಕ್ಷಕ್ಕೆ ರಾಜೀನಾಮೆ ಕೊಡುತ್ತೇನೆಂದು ಶ್ರೀರಾಮುಲು ಹೇಳಿದ್ದರು. ಅಸಮಾಧಾನಗೊಂಡಿದ್ದ ರಾಮುಲು ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಫೋನ್ ಮಾಡಿ ಮನವೊಲಿಸಿದ್ದಾರೆ.
ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ದೆಹಲಿಗೆ ಬನ್ನಿ ಕೂತು ಮಾತಾಡೋಣ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ವೇಳೆ, ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದರ ಬಗ್ಗೆ ರಾಷ್ಟ್ರ ನಾಯಕರಿಗೆ ಶ್ರೀರಾಮುಲು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನದ ಬಗ್ಗೆ ವಿವರಣೆ ನೀಡಿದ್ದಾರೆ.
ಪಕ್ಷ ಬಿಡುವ ಬಗ್ಗೆ, ಪಕ್ಷದ ವಿರುದ್ದ ಏನೂ ಮಾತನಾಡಬೇಡಿ ಎಂದು ಜೆ.ಪಿ. ನಡ್ಡಾ ಮನವೊಲಿಸಿದ್ದಾರೆ. ಅದಕ್ಕೆ, ಒಕೆ ಎಂದು ಶ್ರೀರಾಮುಲು ತಲೆಯಾಡಿಸಿದ್ದಾರೆ.
ಏನು ಘಟನೆ..? – ಸಂಡೂರು ಉಪಚುನಾವಣೆ ಸೋಲಿಗೆ ತಮ್ಮನ್ನು ದೂಷಿಸಿದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರ ವಿರುದ್ಧ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದರು. ವಿಜಯೇಂದ್ರ ಮತ್ತು ಜನಾರ್ದನ ರೆಡ್ಡಿ ಸೇರಿ ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಗೊತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಬೇಕಿದ್ದರೆ ಹೇಳಿ ಈಗಲೇ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ರಾಮುಲು ಅಸಮಾಧಾನ ಹೊರಹಾಕಿದ್ದರು ಎಂದು ಹೇಳಲಾಗಿದೆ.