ಬೆಂಗಳೂರು : ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಪರವಾಗಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರು ಇತ್ತೀಚೆಗೆ ಮಾತಾಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದಲೂ ಪ್ರಿಯಾಂಕಾ ಗಾಂಧಿ ಅವರ ನಿಲುವಿಗೆ ಬೆಂಬಲ ವ್ಯಕ್ತವಾಗಿತ್ತು.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾತ್ರಿ 9 ಗಂಟೆವರೆಗೆ ಮಾತ್ರ ರಾತ್ರಿ ಸಂಚಾರಕ್ಕೆ ಅವಕಾಶ ಇದೆ. ಅದು ಹೊರತುಪಡಿಸಿ ರಾತ್ರಿ 9 ಗಂಟೆ ನಂತರ 2 ಬಸ್‌ಗಳ ಮಾತ್ರ ಸಂಚಾರಕ್ಕೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಹೊರತುಪಡಿಸಿ ಆಸ್ಪತ್ರೆ ಸೇರಿ ಎಮರ್ಜೆನ್ಸಿ ಇದ್ದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ವನ್ಯಜೀವಿ ಸಂರಕ್ಷಣೆ ಹಿನ್ನಲೆ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ ರಾತ್ರಿ ಸಂಚಾರ ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ನಾಯಕರಿಗೆ ಏನಾದರೂ ಮಾಹಿತಿ ಅಗತ್ಯವಿದ್ದರೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.