ಬೆಂಗಳೂರು : ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಬಜೆಟ್‌ ಘೋಷಣೆಯಂತೆ ವಿಧೇಯಕ ತರಲು ಸಂಪುಟ ಸೂಚಿಸಿದೆ. ಮುಸ್ಲಿಮರಿಗೆ 1 ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಒಪ್ಪಿಗೆ ಸೂಚಿಸಿದ್ದು, ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಅನುಮೋದನೆ ನೀಡಿದೆ.

ಇನ್ನೂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿಯವರೆಗಿನ ಕಾಮಗಾರಿ ಮೊತ್ತವನ್ನ 2 ಕೋಟಿ ರೂ.ವರೆಗೆ ವಿಸ್ತರಿಸಿ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿಯನ್ನ ಇತರ ವರ್ಗಗಳಿಗೂ ವಿಸ್ತರಿಸಿದೆ.

ಅಲ್ಲದೇ ಗ್ರಾಮೀಣ ಭಾಗದಲ್ಲಿ ಇ-ಖಾತಾ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣಾ ಕ್ರಮಗಳ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿದ್ದು, ಲೋಕಸೇವಾ ಆಯೋಗದ ಪರೀಕ್ಷೆ ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೂ ಸಂಪುಟ ಒಪ್ಪಿಗೆ ನೀಡಿದೆ. ಜೊತೆಗೆ ಲೋಕಸೇವಾ ಆಯೋಗದ ಸಮಗ್ರ ಸುಧಾರಣೆಗೆ ಕ್ರಮ ವಹಿಸಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ.

ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆಯಲ್ಲಿ 9 ವಿವಿಗಳ ರದ್ದು ಬಗ್ಗೆ ನಿಲುವಳಿ ಮಂಡನೆಗೆ ಅವಕಾಶ ಕೇಳಿದ ಶಾಸಕ ಅಶ್ವಥ ನಾರಾಯಣಗೆ ಉತ್ತರಿಸಿದ ಸಿಎಂ, ನಾವು ಯಾವ ವಿವಿಯನ್ನೂ ಮುಚ್ಚುತ್ತಿಲ್ಲ ಎಂದರು.

ವಿವಿಗಳನ್ನು ಮುಂದುವರೆಸಬೇಕಾ..? ಬೇಡವಾ..? ಅಂತ ಸಂಪುಟ ಉಪಸಮಿತಿ ರಚಿಸಿ ವರದಿ ಕೇಳಿದ್ದೇವೆ. ವರದಿಯೇ ಬಂದಿಲ್ಲ.. ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ..? ಅಂದ್ರು. ವಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪಿಸಿ ಸಿಎಂ, ಡಿಸಿಎಂ, ಇಲಾಖೆ ಸಚಿವರು ಬೇರೆ ಬೇರೆ ಉತ್ತರ ಕೊಡ್ತಿದ್ದಾರೆ. ಬಿಜೆಪಿಯವರ ನಿಲುವಳಿ ಸೂಚನೆಯನ್ನು ಮುಂದಿನ ವಾರ ಚರ್ಚೆಗೆ ಕೊಡೋದಾಗಿ ಸ್ಪೀಕರ್ ಖಾದರ್ ತಿಳಿಸಿದರು.

Leave a Reply

Your email address will not be published. Required fields are marked *