ನವದೆಹಲಿ: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಪರಿಣಾಮ ಸುಮಾರು 49 ರೈಲುಗಳ ಸಂಚಾರ ರದ್ದಾಗಿದೆ. 38 ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಶನಿವಾರ ತಿಳಿಸಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡು, ಅಪಘಾತಕ್ಕೀಡಾದ ರೈಲುಗಳ ಬೋಗಿಗಳನ್ನು ತೆರವುಗೊಳಿಸಿ, ಹಳಿಗಳನ್ನು ಸರಿಪಡಿಸುವ ಕಾರ್ಯ ನಡೆಯಬೇಕಿದೆ. ಅಲ್ಲಿಯವರೆಗೂ ಈ ಮಾರ್ಗದಲ್ಲಿ ರೈಲುಗಳ ಓಡಾಟ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಹಲವಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ 10 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ತಿರುವನಂತಪುರಂ-ಕೋಲ್ಕತ್ತಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22641), ಬೆಂಗಳೂರು-ಗುವಾಹಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12509) ಮತ್ತು ಹೌರಾ-ತಿರುಪತಿ ಹಮ್ಸಾಫರ್ ಎಕ್ಸ್ಪ್ರೆಸ್ (20889) ರೈಲುಗಳು ರದ್ದಾಗಿವೆ.
ಕನ್ಯಾಕುಮಾರಿ-ದಿಬ್ರುಗಢ್ ವಿವೇಕ್ ಎಕ್ಸ್ಪ್ರೆಸ್ (22503) ಮತ್ತು ಹೌರಾ-ಮೈಸೂರು ಎಕ್ಸ್ಪ್ರೆಸ್ (22817) ರೈಲು ಮಾರ್ಗ ಬದಲಾಯಿಸಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.