ಧಾರವಾಡ: ಇಂದು ನಾಡಿನಾದ್ಯಂತ ಸಂಭ್ರಮದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಬ್ಬವನ್ನು ಧಾರವಾಡದ ಮೃತ್ಯುಂಜಯನಗರದಲ್ಲಿರುವ ಜೆಎಸ್ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಶಾಲಾ ಆವರಣದಲ್ಲೇ ಮಣ್ಣಿನ ಹುತ್ತವನ್ನು ನಿರ್ಮಿಸಿ ಅದಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹಾಲನೆರೆದು ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು. ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದ ಶಿಕ್ಷಕರು ಹಾಗೂ ಮಕ್ಕಳು ಗೋಲ ಕೊಬ್ಬರಿ ಆಟವನ್ನಾಡಿದರು. ಅಲ್ಲದೇ ಶಾಲೆಯಲ್ಲೇ ಜೋಕಾಲಿ ಕಟ್ಟಿ ಅದನ್ನು ಜೀಗುವ ಮೂಲಕ ಖುಷಿಪಟ್ಟರು.
ಬಗೆ ಬಗೆಯ ಉಂಡಿಗಳನ್ನು ತಂದು ಸವಿದಿದ್ದಲ್ಲದೇ ಶಾಲೆಯಲ್ಲೇ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಬಳೆಗಳನ್ನು ತೊಟ್ಟು ಪಂಚಮಿಯ ಮೆರಗು ಹೆಚ್ಚಿಸಿದರು. ಮಕ್ಕಳೊಂದಿಗೆ ಮಕ್ಕಳಾದ ಶಿಕ್ಷಕರು ಪಂಚಮಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.