ತಮಿಳುನಾಡು : ಕ್ಷೇತ್ರ ಪುನರ್ವಿಂಗಡಣೆ ನ್ಯಾಯಯುತವಾಗಿರಬೇಕು ಎಂಬುದಷ್ಟೇ ನಮ್ಮ ಆಗ್ರಹದ ಬಗ್ಗೆ ಕುರಿತು ತಮಿಳುನಾಡಿನಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ಪ್ರಾತಿನಿಧ್ಯವನ್ನು ಬಲಪಡಿಸುವ ಯಾವುದನ್ನೂ ನಾವು ವಿರೋಧಿಸುವುದಿಲ್ಲ, ಆದರೆ ಆ ಕ್ರಮವು ನ್ಯಾಯಯುತವಾಗಿರಬೇಕು ಮತ್ತು ನ್ಯಾಯಯುತ ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಬಾರದು ಎಂದು ತಿಳಿಸಿದರು.
ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ರಾಜ್ಯದಿಂದ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ರಾಜ್ಯಗಳೆಲ್ಲ ಸೇರಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಪ್ಲಾನ್ ಮಾಡಲಾಗಿದೆ.
ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ಅನುದಾನದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಹೀಗಾಗಿ ಕೇಂದ್ರದಿಂದ ರಾಜ್ಯಗಳಿಗೆ ಸಿಗಬೇಕಾದ ಹಣವನ್ನು ಪಡೆಯಲು ಹೋರಾಟ ನಡೆಸಲು ಕೂಡ ಸಿದ್ಧರಿದ್ದೇವೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಕೇಂದ್ರದಲ್ಲಿ ನಮ್ಮ ಇಚ್ಛೆ ಇಲ್ಲದಿದ್ದರೂ ಕೂಡ ನಾನಾ ರೀತಿಯ ಕಾನೂನನ್ನು ತರಲಾಗುತ್ತಿದೆ. ಇದರಿಂದ ಜನಸಾಮಾನ್ಯರ ಮೇಲೆ, ರೈತರ ಮೇಲೆ, ವಿದ್ಯಾರ್ಥಿಗಳ ಮೇಲೆ ಸಾಕಷ್ಟು ತೊಂದರೆಯಾಗುತ್ತಿದೆ. ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಕ್ಷೇತ್ರಗಳ ಪುನರ್ವಿಂಗಡಣೆ ಸಂಭವಿಸಿದಲ್ಲಿ ಅಥವಾ ಪ್ರಾತಿನಿಧ್ಯ ಕಡಿಮೆಯಾದರೆ, ನಾವು ನಮ್ಮದೇ ದೇಶದಲ್ಲಿ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳುವ ನಾಗರಿಕರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.