ಮೈಸೂರು : ಅರಮನೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಮಾರ್ಮಿಕವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಸರ್ಕಾರ ಬೆಂಗಳೂರು ಅರಮನೆ ಮೈದಾನದ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಕಾರಣ ಮಾತ್ರ ಗೊತ್ತಿಲ್ಲ. 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇದನ್ನ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಒಂದು ಕಲ್ಲು ಎಸೆದರೆ ನಾವು ಅದಕ್ಕೂ ಸಹ ಹೋರಾಟ ಮಾಡುತ್ತೇವೆ. ಕಾನೂನು ಸಚಿವರಿಗೆ ಮಾಹಿತಿ ಕೊರತೆ ಇಲ್ಲ ಅಂಥ ನಾನು ಹೇಳಲ್ಲ. ಮೆಟ್ರೋಗೆ ಜಾಗ ಬಳಸಿಕೊಂಡರೆ ಎಷ್ಟು ಪರಿಹಾರ ಕೊಡುತ್ತಾರೆ? ನಮ್ಮ ಜಾಗಕ್ಕೆ ಪರಿಹಾರ ಕೊಡುವಾಗ ಮಾತ್ರ ಅಭಿವೃದ್ಧಿ ವಿಚಾರ ನೆನಪಿಗೆ ಬರುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಜಾಗಕ್ಕೆ ಸ್ಟೇ ಆರ್ಡರ್ ಇದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಗಳು ನನ್ನ ಬಳಿ ಇದೆ. ಸಂಪುಟ ಸಭೆಯ ತೀರ್ಮಾನ ನೋಡಿದ್ದೇನೆ. ಸ್ಟೇಟಸ್ ಕೋ ಸಹ ಕೊಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ಇಷ್ಟು ವರ್ಷ ನಡೆದ ಚಟುವಟಿಕೆಯ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಗೊತ್ತಿಲ್ಲದೆ ನಡೆದಿಲ್ಲ. ನಡೆದ ಕಾರ್ಯಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ ಎಂದು ಹೇಳಿದರು.