ಬಾಗಲಕೋಟೆ : 76ನೇ ಗಣರಾಜ್ಯೋತ್ಸವ ಹಿನ್ನಲೆ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಕರ್ನಾಟಕದ 9 ಸಾಧಕರಿಗೆ ಕೂಡ ಪ್ರಶಸ್ತಿ ಬಂದಿದ್ದು, ಆ ಪೈಕಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್‌ ಒಬ್ಬರು. 71 ವರ್ಷಗಳ ಕಾಲ ಗೊಂದಳಿ ಹಾಡಿನ ಮೂಲಕ ಕಲಾಸೇವೆ ಮಾಡಿಕೊಂಡಿದ್ದಾರೆ.

ವೆಂಕಪ್ಪ ಅಂಬಾಜಿ ಸುಗಟೇಕರ್‌ ಬಾಗಲಕೋಟೆಯ ನವನಗರ ನಿವಾಸಿ. 150ಕ್ಕೂ ಹೆಚ್ಚು ಕಥೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಹಾಡುಗಳನ್ನು ವೆಂಕಪ್ಪ ಹಾಡಿದ್ದಾರೆ. ಗೊಂದಳಿ ಕಲಾಸೇವೆ ಮೂಲಕ ಈಗಾಗಲೇ ಗೌರವ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಮನ್ ಕಿ ಬಾತ್​​ ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ವೆಂಕಪ್ಪ ಗುಣಗಾನ ಮಾಡಲಾಗಿತ್ತು. ವಂಶ ಪರಂಪರೆಯ ಗೊಂದಳಿ ಪದಗಾರನನ್ನು ಪ್ರಧಾನಿ ಮೋದಿ ಹೊಗಳಿದ್ದರು. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಸಾವಿರಾರು ಜನರಿಗೆ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ.

ಕಂಚಿನ ಕಂಠದ ಮೂಲಕ ಗೋಂದಳಿ ಪದ ಹಾಡುವ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್​ಗೆ ಮಕ್ಕಳು, ಮೊಮ್ಮಕ್ಕಳು ಧ್ವನಿಯಾಗಿದ್ದಾರೆ. ಕಂಚಿನ ಕಂಠದಿಂದ ಕಳೆದ 71 ವರ್ಷದಿಂದ ಗೊಂದಳಿ‌ ಪದ ಹಾಡಿದ್ದಾರೆ.

ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಲಭಿಸಿವೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಪರ ರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಶಾಲೆ‌ ಕಲಿಯದ ವೆಂಕಪ್ಪ, ವಂಶಪಾರಂಪರ್ಯವಾಗಿ ಬಂದ ಗೊಂದಲಿ ಪದ ಮೂಲಕ ಹೆಸರುವಾಸಿಯಾಗಿದ್ದಾರೆ.

81ನೇ ವಯಸ್ಸಿನಲ್ಲೂ ಇಂದಿಗೂ ವೆಂಕಪ್ಪನವರು ಹಾಡೋಕೆ ನಿಂತರೆ ನೋಡುಗರನ್ನ ಮಂತ್ರ ಮುಗ್ಧರನ್ನಾಗಿಸುತ್ತಾರೆ. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ, ದೇವಿಯ ಪದಗಳು ಹೀಗೆ ಹಲವು ಪ್ರಕಾರದ ಹಾಡುಗಳನ್ನು ಗೊಂದಳಿ ಪದದ ಶೈಲಿ ಮೂಲಕ ಹಾಡುತ್ತಾರೆ. ಆ‌ ಮೂಲಕ ಸಮಾಜದಲ್ಲಿನ ಗೊಂದಲಗಳನ್ನು ಹಾಡಿನ ಮೂಲಕ ವಿವರಿಸುತ್ತಾರೆ.

Leave a Reply

Your email address will not be published. Required fields are marked *