ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 60 ರನ್ಗಳಿಂದ ಸೋತಿದ್ದ ಪಾಕ್ ಪಡೆ ಇದೀಗ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್ಗಳಿಂದ ಪರಾಜಯಗೊಂಡಿದೆ. ಈ ಎರಡು ಸೋಲುಗಳ ಹೊರತಾಗಿಯೂ ಪಾಕಿಸ್ತಾನ್ ತಂಡದ ಸೆಮಿಫೈನಲ್ ಕನಸು ಇನ್ನೂ ಸಹ ಕಮರಿಲ್ಲ ಎನ್ನಲಾಗಿದೆ.
ಏಕೆಂದರೆ ಮುಂದಿನ ಪಂದ್ಯಗಳಲ್ಲಿ ಕೆಲ ತಂಡಗಳ ಫಲಿತಾಂಶ ತಲೆಕೆಳಗಾದರೆ, ಪಾಕಿಸ್ತಾನ್ ತಂಡವು ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ಗೇರಬಹುದು. ಹಾಗಿದ್ರೆ ಸೆಮಿಫೈನಲ್ಗೇರಲು ಪಾಕಿಸ್ತಾನ್ ತಂಡದ ಮುಂದಿರುವ ಹಾದಿಗಳಾವುವು…?
ಬಾಂಗ್ಲಾದೇಶ್ ವಿರುದ್ಧ ನ್ಯೂಝಿಲೆಂಡ್ ಸೋಲಬೇಕು. ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ತಂಡ ಜಯ ಸಾಧಿಸಬೇಕು.
ಭಾರತದ ವಿರುದ್ಧ ನ್ಯೂಝಿಲೆಂಡ್ ಸೋಲಬೇಕು. ಹೀಗಾದಲ್ಲಿ ನ್ಯೂಝಿಲೆಂಡ್, ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ತಂಡಗಳು ತಲಾ 2 ಅಂಕಗಳನ್ನು ಪಡೆಯಲಿದೆ. ಇನ್ನು ಮೂರು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 6 ಅಂಕಗಳನ್ನು ಹೊಂದಲಿದೆ.
ಅದರಂತೆ ಭಾರತ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಕರಿಸಿ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಇನ್ನು ದ್ವಿತೀಯ ಸ್ಥಾನಕ್ಕಾಗಿ ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಅಂದರೆ ಈ ಮೂರು ತಂಡಗಳು ತಲಾ 2 ಅಂಕಗಳನ್ನು ಹೊಂದಿದ್ದರೆ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ ನಾಕೌಟ್ ಹಂತಕ್ಕೇರಲು ಅವಕಾಶ ಸಿಗಲಿದೆ.
ಇಂತಹದೊಂದು ಅವಕಾಶ ರೂಪುಗೊಳ್ಳಲು ನ್ಯೂಝಿಲೆಂಡ್ ವಿರುದ್ಧ ಬಾಂಗ್ಲಾದೇಶ್ ಗೆಲ್ಲಬೇಕು. ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ತಂಡವನ್ನು ಸೋಲಿಸಬೇಕು. ನ್ಯೂಝಿಲೆಂಡ್ ತಂಡದ ವಿರುದ್ಧ ಭಾರತ ತಂಡ ಜಯ ಸಾಧಿಸಬೇಕು. ಈ ಮೂರು ಫಲಿತಾಂಶಗಳು ಮೂಡಿಬಂದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್ಗೇರುವ ಅವಕಾಶಗಳು ದೊರೆಯಲಿದೆ.
ಒಂದು ವೇಳೆ ಮುಂದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ. ಹೀಗಾಗಿ ಇಂದು ನಡೆಯಲಿರುವ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.