ರಾಮನಗರ : ಬಿಡದಿಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆಯಾಗಿದೆ. ಶೌಚಾಲಯದ ಗೋಡೆ ಮೇಲೆ `ಪಾಕಿಸ್ತಾನಕ್ಕೆ ಜೈ, ಪಾಕಿಸ್ತಾನಕ್ಕೆ ಜಯವಾಗಲಿ’ ಎಂಬ ಬರಹ ಪತ್ತೆಯಾಗಿದೆ. ದೇಶದ್ರೋಹದ ಬರಹದ ಜೊತೆಗೆ ಕಿಡಿಗೇಡಿಗಳು ಕನ್ನಡಿಗರ ಬಗ್ಗೆಯೂ ಅವಾಚ್ಯ ಬರಹ ಬರೆದಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಿಡಿಗೇಡಿಗಳೇ ಈ ಆಕ್ಷೇಪಾರ್ಹ ಬರಹ ಬರೆದಿರುವ ಅನುಮಾನ ವ್ಯಕ್ತವಾಗಿದೆ.

ಕಿಡಿಗೇಡಿಗಳ ಕೃತ್ಯವನ್ನ ಕಾರ್ಖಾನೆಯ ಆಡಳಿತ ಮಂಡಳಿ ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದು, ಈ ರೀತಿಯ ಬರವಣಿಗೆ ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಮುಂದುವರೆದು ದೇಶದ ಕಾನೂನಿನ ಚೌಕಟ್ಟಿನಲ್ಲಿ ದೇಶದ್ರೋಹಿ ಅಪರಾಧವಾಗುತ್ತದೆ. ಅಂತಹ ಕಾರ್ಮಿಕರನ್ನ ಪೊಲೀಸರಿಗೆ ಒಪ್ಪಿಸಿ, ಜೈಲು ವಾಸವಾಗುವಂತೆ ಕ್ರಮವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿ ಕೈತೊಳೆದುಕೊಂಡಿದೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಸುಮ್ಮನಾಗಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಖಾನೆಗೆ ದೌಡಾಯಿಸಿದ ಪೊಲೀಸರು, ಬರಹ ಬರೆದ ಶೌಚಾಲಯದ ಸ್ಥಳ ಪರಿಶೀಲನೆ ಮಾಡಿದರು. ಬಳಿಕ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರಿಂದ ಮಾಹಿತಿ ಪಡೆದು, ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ಮಾಡಿದರು. ಕಾರ್‌ನ ಸೀಟ್‌ಗಳನ್ನು ತಯಾರು ಮಾಡುವ ಕಾರ್ಖಾನೆಯಲ್ಲಿ ಸುಮಾರು 400 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಾಮಧೇಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೌಚಾಲಯದಲ್ಲಿ ಪಾಕಿಸ್ತಾನದ ಪರ ಕನ್ನಡಿಗರ ವಿರುದ್ಧವೂ ಅವಹೇಳನ ಬರಹ ಹಿನ್ನೆಲೆ ಕಿಡಿಗೇಡಿಗಳ ಬಂಧನಕ್ಕೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಇದು ದೇಶದ್ರೋಹದ ಕೆಲಸ, ಇಂತಹ ಕೃತ್ಯ ಎಸಗಿರುವವರನ್ನ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

Leave a Reply

Your email address will not be published. Required fields are marked *