ಬೆಂಗಳೂರು : ಸುಮಾರು 32 ಸಾವಿರ ಕೋಟಿ ರೂ. ಬಾಕ್ ಬಿಲ್ ಬಿಡುಗಡೆ ಸಂಬಂಧ ರಾಜ್ಯ ಸರಕಾರ ಮತ್ತು ಗುತ್ತಿಗೆದಾರರ ಸಂಘದ ನಡುವಿನ ಸಂಘರ್ಷ ಮತ್ತೆ ಶುರುವಾಗಿದೆ.
ಬಾಕಿ ಬಿಲ್‌ಗಳನ್ನು ತೆರವುಗೊಳಿಸುವಲ್ಲಿ ವಿಳಂಬ ಮತ್ತು ಗುತ್ತಿಗೆ ನೀಡುವಲ್ಲಿ ಅಕ್ರಮಗಳ ಆರೋಪದ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಏಳು ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮತ್ತು ಆರ್‌ಡಿಆರ್‌ಪಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಏಳು ಸಚಿವರಿಗೆ ಸಂಘ ಪತ್ರ ಬರೆದಿದೆ.
32,000 ಕೋಟಿ ರೂ. ಮೌಲ್ಯದ ಬಿಲ್‌ಗಳು ಬಾಕಿ ಉಳಿದಿವೆ ಮತ್ತು ಬಾಕಿ ಬಿಡುಗಡೆ ಮಾಡುವಾಗ ಸರ್ಕಾರ ಹಿರಿತನವನ್ನು ಪರಿಗಣಿಸುತ್ತಿಲ್ಲ. ಶಾಸಕರು ಶಿಫಾರಸು ಮಾಡಿದ ಬಿಲ್‌ಗಳನ್ನು ಇಲಾಖೆಗಳು ತೆರವುಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಶಾಸಕರು ಶಿಫಾರಸು ಮಾಡಿದವರಿಗೆ ಕೆಲಸದ ಟೆಂಡರ್‌ಗಳನ್ನು ಕೂಡ ನೀಡಲಾಗುತ್ತಿದೆ, ಇದು ಹೀಗೆಯೇ ಮುಂದುವರಿದರೆ ಪ್ರತಿಭಟನೆ ಮಾಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಇದರಲ್ಲಿ ಎಲ್ಲಾ ಪಕ್ಷಗಳ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ, ಅವರ ಹೆಸರುಗಳನ್ನು ನಾನು ಬಿಡುಗಡೆ ಮಾಡಬಲ್ಲೆ ಎಂದು ಹೇಳಿದ್ದಾರೆ.
ಈ ಕುರಿತು ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರವೂ ಕ್ರಮವಾಗದಿದ್ದರೆ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತರಲಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೇಗಜಿ ಅವರು ಹೇಳಿದ್ದಾರೆ.
ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಗುತ್ತಿಗೆದಾರರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿ ಏಳು ಸಚಿವರಿಗೆ ಪತ್ರ ಬರೆದಿದ್ದಾರೆ. ಪ್ರತಿಭಟನೆಗಳಿಗೆ ಮುಂದಾಗುತ್ತಿದ್ದಾರೆ. ಸರ್ಕಾರ ಕೂಡಲೇ ಬಾಕಿ ಇರುವ ಬಿಲ್‌ಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಪತ್ರವು ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹೇಗೆ ಆಳುತ್ತಿದೆ ಎಂಬುದನ್ನು ತೋರಿಸತ್ತಿದೆ. ಸರ್ಕಾರವು ಶೇಕಡಾ 60 ರಷ್ಟು ಕಮಿಷನ್ ಪಡೆಯುತ್ತಿದೆ. ಆದರೆ, ತಮ್ಮ ಬಿಲ್ ಗಳ ಹಣವನ್ನು ಪಡೆಯಬೇಕಿರುವ ಕಾರಣ ಗುತ್ತಿಗೆದಾರರು ಅದರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಹೇಳಿದರು.