ನವದೆಹಲಿ : ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಘೋಷಣೆ ಮಾಡಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪೆನ್ನಾರ್ ನದಿಯ ಉಪನದಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎತ್ತಿರುವ ತಕರಾರಿನ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರ ಭೇಟಿ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಶಿವಕುಮಾರ್ ಉತ್ತರಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ಹಣವನ್ನು ಕಡಿತಗೊಳಿಸಲಾಗುವುದು ಎನ್ನುವ ಸುದ್ದಿಯಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಯಿಲ್ಲ. ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯೋಜನೆಯ ವಿವರಗಳನ್ನು ಕಳುಹಿಸಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು.

ತಮಿಳುನಾಡಿನವರು ಪೆನ್ನಾರ್ ನದಿ ನೀರಿನ ವಿಚಾರವಾಗಿ ಕಳೆದ 2ನೇ ತಾರೀಕಿನಂದು ಅಫಿಡವಿಟ್ ಸಲ್ಲಿಸಿದ್ದಾರೆ. ಮೂರು ವಾರದಲ್ಲಿ ತೀರ್ಮಾನ ಮಾಡಬೇಕಿರುವ ಕಾರಣಕ್ಕೆ ಅಫಿಡವಿಟ್ ಸಲ್ಲಿಕೆ ಮಾಡಲು ತಿಳಿಸಿದ್ದರು. ವಿಧಾನಸಭೆ ಚಳಿಗಾಲದ ಅಧಿವೇಶನವಿದ್ದ ಕಾರಣಕ್ಕೆ ನಮ್ಮಿಂದ ವಿಳಂಬವಾಯಿತು. ನಾವು ದಿನಾಂಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ಮಾತುಕತೆ ನಡೆಸಬೇಕಿರುವ ಕಾರಣಕ್ಕೆ ಶೀಘ್ರದಲ್ಲೇ ಸಭೆಗೆ ಒಂದು ದಿನಾಂಕವನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿದೆ.

ಈ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ ಕೋಲಾರದ ನೀರಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಅರಿವಿದೆ. ಕೋಲಾರದ ಕೆರೆಗಳಿಗೆ ವೃಷಭಾವತಿ ಸೇರಿದಂತೆ ಕೆ.ಸಿ ವ್ಯಾಲಿ ಯೋಜನೆಯಿಂದ ಬಳಕೆಯಾದ ನೀರನ್ನು ಶುದ್ದೀಕರಿಸಿ ತುಂಬಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *