ಮುಂಬೈ : ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು, ಅವರಿಗೆ ಬೇಕಾದಾಗ ಮಾತ್ರ ಜನ ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡುತ್ತಾರೆ ಚುನಾವಣೆ ಸಂದರ್ಭದಲ್ಲಿ ಮರೆತುಬಿಡುತ್ತಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ನೂತನ ವರ್ಷದ ಹಿನ್ನೆಲೆಯಲ್ಲಿ ಎಕ್ಸ್ ಖಾತೆಯಲ್ಲಿ ಸಂದೇಶ ನೀಡಿರುವ ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶಗಳನ್ನು ಹಿಂದೆ ಇರಿಸಿ, ಮುಂದುವರಿಯುವಂತೆ ಮನವಿ ಮಾಡಿದರು. ಅತೀ ಶೀಘ್ರದಲ್ಲೇ ಅವರೊಂದಿಗೆ ಮಾತನಾಡುವುದಾಗಿ ಮತ್ತು ಮುಂದಿನ ಕ್ರಮದ ಬಗ್ಗೆ ವಿಶಾಲವಾದ ನಿರ್ದೇಶನವನ್ನು ನೀಡುವುದಾಗಿ ಠಾಕ್ರೆ ಹೇಳಿದ್ದಾರೆ.
“ಕೆಲವು ವಿಷಯಗಳು ಬದಲಾಗಿಲ್ಲ…., ಜನರು ಪ್ರತಿ ಸಮಸ್ಯೆಯ ಪರಿಹಾರಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಮತದಾನ ಮಾಡುವಾಗ ಅದನ್ನು ನಿರ್ಲಕ್ಷಿಸುತ್ತಾರೆ” ಎಂದರು.
ನ.20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ 288 ವಿಧಾನಸಭಾ ಸ್ಥಾನಗಳ ಪೈಕಿ 125 ರಲ್ಲಿ ಎಂಎನ್‌ಎಸ್ ಸ್ಪರ್ಧಿಸಿತ್ತು ಆದರೆ ಯಾವುದೇ ಸ್ಥಾನ ಗಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಚುನಾವಣಾ ಫಲಿತಾಂಶದ ಕೆಲವೇ ವಾರಗಳಲ್ಲಿ, ರಾಜ್ಯದಲ್ಲಿ ಮರಾಠಿ ಭಾಷಿಕರ ವಿರುದ್ಧ “ದಬ್ಬಾಳಿಕೆ” ಪ್ರಾರಂಭವಾಗಿದೆ. ಈ ಪ್ರಕರಣಗಳಲ್ಲಿ MNS ಕ್ರಮ ತೆಗೆದುಕೊಳ್ಳುತ್ತದೆ ಎಂದು ಜನರು ನಿರೀಕ್ಷಿಸಿದ್ದರು, ನಿರೀಕ್ಷೆಯಂತೆ ಎಂಎನ್ಎಸ್ ಮಾಡಿದೆ. “ಮರಾಠಿ ಮಾನೂಸ್” ನ್ನು ಕೇವಲ ಮತಕ್ಕಾಗಿ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.