ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್​ನಲ್ಲಿ ನಡೆಯಿತು. ಹಿರಿಯ ವಕೀಲ ರವಿವರ್ಮ ಕುಮಾರ್ ನೇತೃತ್ವದ ಪ್ರಾಸಿಕ್ಯೂಶನ್​ನಿಂದ ವಾದ ಇಂದು ಮುಗಿದಿದೆ.

ನ್ಯಾ| ನಾಗಪ್ರಸನ್ನ ಅವರಿರುವ ಏಕಸದಸ್ಯ ನ್ಯಾಯಪೀಠವು ಈ ಪ್ರಕರಣದಲ್ಲಿ ಆರೋಪಿ ಬಿಎಸ್​ವೈ ಪರ ವಕೀಲರ ವಾದಕ್ಕೆ ಜನವರಿ 17 ಅನ್ನು ನಿಗದಿ ಮಾಡಿದೆ. ವಿಚಾರಣೆಯಲ್ಲಿ ಯಡಿಯೂರಪ್ಪ ಖುದ್ದಾಗಿ ಹಾಜರಾಗುವುದರಿಂದ ನೀಡಲಾಗಿದ್ದ ವಿನಾಯಿತಿಯನ್ನೂ ಹೈಕೋರ್ಟ್ ವಿಸ್ತರಣೆ ಮಾಡಿದೆ. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಯಡಿಯೂರಪ್ಪ ಪರ ವಾದ ಮಾಡುತ್ತಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಅಪ್ರಾಪ್ತೆಯ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದರೆನ್ನುವ ಗುರುತರ ಆರೋಪ ಈ ಪ್ರಕರಣದಲ್ಲಿ ಕೇಳಿಬಂದಿದೆ.

ಸಂಬಂಧಿಯೊಬ್ಬರಿಂದ 9 ವರ್ಷದ ಹಿಂದೆ ಆದ ಅತ್ಯಾಚಾರ ಘಟನೆ ವಿಚಾರದ ಬಗ್ಗೆ ಸಹಾಯ ಕೋರಿ 2024ರ ಫೆಬ್ರುವರಿ 2ರಂದು 17 ವರ್ಷದ ಬಾಲಕಿ ಹಾಗೂ ಆಕೆಯ ತಾಯಿಯು ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸಕ್ಕೆ ಹೋಗಿದ್ದರು. ಆಗ ಬಾಲಕಿ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಇದೆ.

ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿರುವ ಮಾಹಿತಿ ಪ್ರಕಾರ, ಅಂದು ಯಡಿಯೂರಪ್ಪ ಅವರು ತಮ್ಮ ಕೊಠಡಿಗೆ ಬಾಲಕಿಯೊಬ್ಬಳನ್ನೇ ಕರೆದು ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿ ಪ್ರತಿರೋಧಿಸಿದಾಗ ಯಡಿಯೂರಪ್ಪ ನಗದು ಹಣ ನೀಡಿದ್ದಾರೆ. ಇವತ್ತು ಹೈಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್​ನಿಂದ ನ್ಯಾಯಾಧೀಶರಿಗೆ ಈ ಘಟನೆಯನ್ನು ವಿವರಿಸಲಾಯಿತು.

Leave a Reply

Your email address will not be published. Required fields are marked *