ಬೆಂಗಳೂರು : ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಸಭೆ ನಡೆಸಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಅವರು ಡಿನ್ನರ್ ಸಭೆ ನಡೆಸಲು ಮುಂದಾಗಿದ್ದಾರೆ. ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪರಮೇಶ್ವರ್ ಡಿನ್ನರ್ ಆಯೋಜಿಸಿದ್ದಾರೆ. ದಲಿತ ಶಾಸಕರು ಹಾಗೂ ದಲಿತ ಸಚಿವರ ಜೊತೆ ಪರಮೇಶ್ವರ್ ಡಿನ್ನರ್ ಸಭೆ ನಡೆಸಲಿದ್ದಾರೆ.
2023 ರ ವಿಧಾನಸಭೆ ಚುನಾವಣೆಯ ಪರಾಜಿತ ದಲಿತ ಅಭ್ಯರ್ಥಿಗಳಿಗೂ ಈ ಭೋಜನ ಕೂಟಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಈ ಡಿನ್ನರ್ ಸಭೆಯ ಮೂಲಕ ದಲಿತ ಸಿಎಂ ಕಾರ್ಡ್ ಪ್ಲೇ ಮಾಡಲು ಪರಮೇಶ್ವರ್ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾಳೆ ನಾನು ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಡಿನ್ನರ್ ಪಾರ್ಟಿ ಅಲ್ಲ. ಮುಂದೆ ನಾವು ಎಸ್‌ಸಿ, ಎಸ್‌ಟಿ ಸಮಾವೇಶ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ಎಲ್ಲ ಎಸ್‌ಸಿ – ಎಸ್‌ಟಿ ಸಮುದಾಯದ ಸಚಿವರು, ಶಾಸಕರಿಗೆ ಆಹ್ವಾನ ನೀಡಿದ್ದೇವೆ. ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸುತ್ತೇವೆ. ಸಂಜೆ 7 ಗಂಟೆಗೆ ನಡೆಯುವ ಈ ಡಿನ್ನರ್‌ಗೆ ಎಸ್‌ಟಿ, ಎಸ್‌ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಹಾಗೆಂದ ಮಾತ್ರಕ್ಕೆ ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್‌ಟಿ, ಎಸ್‌ಸಿ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಅದರ ಬಗ್ಗೆಯೂ ನಾಳೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಕೆಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.
ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿತ್ತು. ಸಭೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಭಾಗಿಯಾಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು.
ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ್ದಾಗಿ ಸತೀಶ್ ಜಾರಕಿಹೊಳಿ ಕಚೇರಿ ಮೂಲಗಳು ತಿಳಿಸಿದ್ದರೂ ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗಲೇ ಈ ಔತಣಕೂಟ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ಎಂದು ತಿಳಿದು ಬಂದಿದೆ.