ಮೈಸೂರು: ಹಂಪನಾ ಎಂದೇ ಖ್ಯಾತರಾಗಿರುವ ಹಿರಿಯ ಸಾಹಿತಿ ಪ್ರೊ.ಎಚ್.ಪಿ.ನಾಗರಾಜಯ್ಯ ಅವರನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಹಂಪನಾ ಅವರ ಅನನ್ಯ ಕೊಡುಗೆಯನ್ನು ಗುರುತಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕೆಎಸ್‌ಒಯು) ಆಯೋಜಿಸಿದ್ದ “ಕರ್ನಾಟಕ ಸಾಂಸ್ಕೃತಿಕ ಚಿಂತನ ಸಮಾವೇಶ” ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಈ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪ್ರೊ.ಹಂಪನಾ ಅವರೂ ಉಪಸ್ಥಿತರಿದ್ದು, ವೇದಿಕೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿ, ಪಕ್ಕದಲ್ಲಿ ಕೂರಿಸಿ ಗೌರವ ಸೂಚಿಸಿದರು.ಪ್ರೊ.ಹಂಪನಾ ಅವರ ಹಿನ್ನೆಲೆಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರದವರಾದ ಹಂಪನಾ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

1978 ರಿಂದ 1986 ರವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಈ ಅವಧಿಯಲ್ಲಿ ಅವರು ವಿವಿಧ ಲೇಖಕರ ಸುಮಾರು 300 ವಿದ್ವತ್ಪೂರ್ಣ ಕೃತಿಗಳನ್ನು ಪ್ರಕಟಿಸಿದರು.

ಹಂಪನಾ ಅವರು ಕನ್ನಡ ಸಾಹಿತ್ಯಕ್ಕೆ, ವಿಶೇಷವಾಗಿ ಜೈನ ಅಧ್ಯಯನದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಪ್ರಮುಖ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 2006 ರಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ “ನಾಡೋಜ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *