ಪ್ರಯಾಗ್‌ರಾಜ್ : ಮಹಾ ಕುಂಭಮೇಳದಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ನಟಿ, ನಿರೂಪಕಿ ಅನುಶ್ರೀ, ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ರಾಜ್ ಬಿ ಶೆಟ್ಟಿ ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಹಣೆಯಲ್ಲಿ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಕುಂಭಮೇಳದಲ್ಲಿ ಭಾಗಿಯಾದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ ಬಿ ಶೆಟ್ಟಿ, ನಾವು ಬೆಂಗಳೂರಿನ ಸ್ನೇಹಿತರ ಜೊತೆ ಕುಂಭಮೇಳಕ್ಕೆ ಆಗಮಿಸಿದ್ದೇವೆ. ನಿನ್ನೆ ನಾವು ಪವಿತ್ರ ಸ್ನಾನ ಮಾಡಿದೆವು ಎಂದು ತಿಳಿಸಿದರು.
ಮೌನಿ ಅಮಾವಾಸ್ಯೆಯಂದೇ ನೀವು ಸ್ನಾನ ಮಾಡಲು ತೆರಳಿದ್ದೀರಾ ಎಂಬ ಪ್ರಶ್ನೆಗೆ, ನಾವು ಹಾಗೆ ಯಾವುದೇ ಪ್ಲ್ಯಾನ್ ಮಾಡಿ ಬಂದಿಲ್ಲ. 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳದಲ್ಲಿ ಭಾಗವಹಿಸುವ ಸಲುವಾಗಿ ಬಂದಿದ್ದೇವೆ. ನಮ್ಮ ಅದೃಷ್ಟ ಎಂಬಂತೆ ಮೌನಿ ಅಮವಾಸ್ಯೆಯಂದೇ ನಮಗೆ ಸ್ನಾನ ಮಾಡುವ ಅದೃಷ್ಟ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು.
ಕೋಟ್ಯಂತರ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ನಿರ್ವಹಣೆ ಮಾಡುವುದು ಬಹಳ ಕಷ್ಟ. ಪೊಲೀಸರು ಬಹಳ ಚೆನ್ನಾಗಿ ಕೆಲಸ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾ ಕುಂಭಮೇಳಕ್ಕೆ ತೆರಳಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಯವರು ತಮ್ಮ ದೈವಿಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪುಣ್ಯ ನದಿಯಲ್ಲಿ ಮುಳುಗಿ ಏಳುವಾಗ ತುಂಬಾ ಭಾವುಕ ಅನುಭವವನ್ನು ನಾನು ಅನುಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆ ದೈವಿಕ ಅನುಭವ ಕುಂಭ ಮೇಳದಲ್ಲಿ ಭಾಗಿಯಾದವರರಿಗೆ ಮಾತ್ರ ಸಿಗುತ್ತದೆ. ಒಂದು ಬಿಸಿ ವಸ್ತುವನ್ನು ಮುಟ್ಟಿದವರಿಗೆ ಹೇಗೆ ತಿಳಿಯುತ್ತದೆಯೋ ಈ ಅನುಭವ ಸಹ ಹಾಗೆಯೇ. ಆ ಅದ್ಭುತ ಅನುಭವವನ್ನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯಬೇಕು. ಹರಹರ ಮಹಾದೇವ ಎಂದು ತೆರಳುವಾಗ ಅಲ್ಲಿನ ದೀಪಾಲಂಕಾರಗಳಲ್ಲಿ ಶಿವನೇ ಆಶೀರ್ವಾದ ಮಾಡುವಂತೆ ಕಾಣುತ್ತದೆ. ನಾನಂತೂ ನೀರಿನಲ್ಲಿ ಮುಳುಗಿದಾಗೆಲ್ಲ ಕಣ್ಣೀರು ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಂಗಮದಲ್ಲಿ ಮಿಂದು.. ಕಣ್ಣುಗಳು ನೆಂದು ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು.. ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗುತ್ತಿರಲಿಲ್ಲ ಎಂದು ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಹಳ ದೂರ ನಡೆದುಕೊಂಡೇ ಪವಿತ್ರ ಸ್ನಾನ ಮಾಡಲು ಬರಬೇಕು. ಆಧ್ಯಾತ್ಮಿಕವಾಗಿ ಇದೊಂದು ಪವಿತ್ರ ಕಾರ್ಯಕ್ರಮ. ಇಂದು ನಾವು ಅಖಾಡಗಳಿಗೆ ಭೇಟಿ ನೀಡಲಿದ್ದೇವೆ ಎಂದರು.