Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ; ನವೆಂಬರ್ನಿಂದ ವಿದೇಶಿ ದೇಣಿಗೆಗೆ ಅವಕಾಶ ಸಾಧ್ಯತೆ
ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ವಿದೇಶಗಳಿಂದ ದೇಣಿಗೆ ಸ್ವೀಕರಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅರ್ಜಿ ಸಲ್ಲಿಸಿದ್ದು, ಇದಕ್ಕೆ ನವೆಂಬರ್ನಲ್ಲಿ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡುವ ನಿರೀಕ್ಷೆ ಇದೆ. ಇದೇ ವೇಳೆ ಮಂದಿರದ ಉದ್ಘಾಟನಾ ದಿನದಂದು ಪಾಕಿಸ್ತಾನದ ಹಿಂದೂಗಳನ್ನೂ ಆಹ್ವಾನಿಸಲಾಗುವುದು ಟ್ರಸ್ಟ್ ತಿಳಿಸಿದೆ.
ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ನವೆಂಬರ್ನಿಂದ ಅನಿವಾಸಿ ಭಾರತೀಯರ (ಎನ್ಆರ್ಐ) ಖಾತೆಗಳ ಮೂಲಕ ವಿದೇಶಿ ಹಣ ದೇಣಿಗೆ ಪಡೆಯಲು ಕೇಂದ್ರ ಗೃಹ ಸಚಿವಾಲಯವು ಅನುಮತಿ ನೀಡುವ ನಿರೀಕ್ಷೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೊಂದಿದೆ.
ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಯಾತ್ರಾರ್ಥಿಗಳು ಮತ್ತು ಭಕ್ತರು ಕೊಡುಗೆಗಳ ಮೂಲಕ ರಾಮ ಮಂದಿರ ಟ್ರಸ್ಟ್ ಒಂದು ತಿಂಗಳಿಗೆ ಒಂದು ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸುತ್ತಿದೆ. ಅಲ್ಲದೇ, ರಾಮ ಮಂದಿರ ಉದ್ಘಾಟನೆಗೂ ಮುನ್ನ ಅನಿವಾಸಿ ಭಾರತೀಯರು ಮತ್ತು ವಿದೇಶಿಗರು ತಮ್ಮ ಕೊಡುಗೆಯನ್ನು ನೀಡಲು ಬಯಸುತ್ತಿದ್ದಾರೆ. ಆದರೆ, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (Foreign Contribution Regulation Act – FCRA) ನೋಂದಣಿಯನ್ನು ಇನ್ನೂ ಪಡೆಯದ ಕಾರಣ ಟ್ರಸ್ಟ್ಗೆ ದೇಶದ ಹೊರಗಿನಿಂದ ದೇಣಿಗೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಟ್ರಸ್ಟ್ನ ಕ್ಯಾಂಪ್ ಕಚೇರಿಯ ಉಸ್ತುವಾರಿ ಪ್ರಕಾಶ್ ಕುಮಾರ್ ಗುಪ್ತಾ ಮಾತನಾಡಿ, “ವಿದೇಶಿ ದೇಣಿಗೆ ಸ್ವೀಕರಿಸುವ ಕುರಿತು ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಅಗತ್ಯ ದಾಖಲಾತಿಗಳನ್ನೂ ಸಿದ್ಧತೆ ಪಡಿಸಲಾಗಿದೆ. ನವೆಂಬರ್ನಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆಯುವ ಭರವಸೆ ಹೊಂದಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಇತರ ದೇಶಗಳಿಂದ ದೇಣಿಗೆ ಸ್ವೀಕರಿಸಲು ಪ್ರಾರಂಭಿಸುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.
“ಅಲ್ಲದೇ, ಈಗಾಗಲೇ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಪ್ರತಿದಿನ ವಿದೇಶಿ ಹಣವನ್ನು ವರ್ಗಾಯಿಸಲು ಅನುಸರಿಸಬೇಕಾದ ಪ್ರಕ್ರಿಯೆಯ ಬಗ್ಗೆ ವಿಚಾರಿಸುತ್ತಾರೆ. ಆದರೆ ನಾವು ಅವರಿಗೆ ಸ್ವಲ್ಪ ಸಮಯ ಕಾಯಲು ಹೇಳುತ್ತಿದ್ದೇವೆ. ಟ್ರಸ್ಟ್ನ ವೆಬ್ಸೈಟ್ನಲ್ಲೂ ಪ್ರಕಟಿಸುತ್ತೇವೆ. ನಾವು ಕ್ಲಿಯರೆನ್ಸ್ ಪಡೆದ ನಂತರ ವೆಬ್ಸೈಟ್ನಲ್ಲಿ ವಿವರಗಳನ್ನು ನವೀಕರಿಸುತ್ತೇವೆ” ಎಂದು ಅವರು ಮಾಹಿತಿ ನೀಡಿದರು.
ದೆಹಲಿಯಲ್ಲಿ ಎನ್ಆರ್ಐ ಖಾತೆ: 2020ರ ಫೆಬ್ರವರಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೋಂದಣಿಯಾಗಿದೆ. ಮೂರು ವರ್ಷಗಳವರೆಗೆ ತನ್ನ ಬ್ಯಾಂಕ್ ಖಾತೆಗಳ ಆಡಿಟ್ ಹಾಗೂ ಇತರ ದಾಖಲೆಗಳೊಂದಿಗೆ ಮೇ ತಿಂಗಳಲ್ಲಿ ಎಫ್ಸಿಆರ್ಎ ನೋಂದಣಿಗೆ ಅರ್ಜಿ ಸಲ್ಲಿಸಿದೆ. ನೋಂದಣಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಾಮಾನ್ಯವಾಗಿ ಆರು ತಿಂಗಳು ತೆಗೆದುಕೊಳ್ಳುತ್ತದೆ. ಹೀಗಾಗಿ ನವೆಂಬರ್ 30ರೊಳಗೆ ಕ್ಲಿಯರೆನ್ಸ್ ಸಿಗುವ ನಿರೀಕ್ಷೆಯನ್ನು ಟ್ರಸ್ಟ್ ಹೊಂದಿದೆ.
ಟ್ರಸ್ಟ್ನ ಎನ್ಆರ್ಐ ಅಥವಾ ಎಫ್ಸಿಆರ್ ಖಾತೆಯನ್ನು ದೆಹಲಿಯ ಸಂಸತ್ ಮಾರ್ಗದಲ್ಲಿರುವ ಎಸ್ಬಿಐ ಮುಖ್ಯ ಶಾಖೆಯಲ್ಲಿ ತೆರೆಯಲಾಗುತ್ತದೆ. ಉತ್ತರ ಪ್ರದೇಶವು 694 ಎಫ್ಸಿಆರ್ಎ ನೋಂದಾಯಿತ ಸಂಸ್ಥೆಗಳನ್ನು ಹೊಂದಿದೆ. ಅವುಗಳಲ್ಲಿ ಎಂಟು ಪ್ರಸ್ತುತ ಅಯೋಧ್ಯೆ – ಫೈಜಾಬಾದ್ನಲ್ಲಿ ಸಕ್ರಿಯವಾಗಿದ್ದು, ವಿದೇಶಿ ಹಣವನ್ನು ಸ್ವೀಕರಿಸುತ್ತವೆ. ನವೆಂಬರ್ 30ರೊಳಗೆ ದೇವಾಲಯದ ನಿರ್ಮಾಣದ ಬಹುಪಾಲು ಕಾಮಗಾರಿ ಮುಗಿಯುವ ನಿರೀಕ್ಷೆ ಸಹ ಇದೆ. 2024ರ ಜನವರಿಯಲ್ಲಿ ಮಂದರಿ ಉದ್ಘಾಟನೆ ಕುರಿತ ಮಾತುಗಳು ಕೇಳಿ ಬರುತ್ತಿದ್ದು, ಹರಿದುಬರುವ ದೇಣಿಗೆಗಳನ್ನು ಯಾತ್ರಿಕರ ಸೌಲಭ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ: ಶ್ರೀರಾಮ ಜನ್ಮಭೂಮಿ ನಿರ್ಮಾಣ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, “ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ದಿನದಂದು ಪಾಕಿಸ್ತಾನದ ಹಿಂದೂಗಳನ್ನು ಆಹ್ವಾನಿಸಲಾಗುವುದು” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಮಮಂದಿರದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆಯು ಡಿಸೆಂಬರ್-ಜನವರಿಯಲ್ಲಿ ನಡೆಯಲಿದೆ. ರಾಮ ಮಂದಿರ ಉದ್ಘಾಟನೆ ವೇಳೆ ಅಯೋಧ್ಯೆ ರಾಮಭಕ್ತರಿಂದ ತುಂಬಿ ತುಳುಕಲಿದೆ. ರಾಮಮಂದಿರದ ಉದ್ಘಾಟನೆಯನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಜನರು ಸೇರುತ್ತಾರೆ. ಅಲ್ಲದೆ, ಪಾಕಿಸ್ತಾನದಿಂದಲೂ ಹಿಂದೂಗಳನ್ನು ಕರೆಸಲಾಗುವುದು. ಅಯೋಧ್ಯೆಯ ಈ ರಾಮ ಮಂದಿರ ದೇಶದ ಗೌರವದ ಪ್ರತೀಕವಾಗಿದೆ” ಎಂದು ರಾಯ್ ಹೇಳಿದ್ದಾರೆ.