ನವದೆಹಲಿ : 2013ರ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಅವರಿಗೆ ಮಾರ್ಚ್ 31 ರವರೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ನ್ಯಾಯ ಪೀಠ ಈ ಜಾಮೀನು ನೀಡಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ಅವರ ಅನುಯಾಯಿಗಳನ್ನು ಭೇಟಿ ಮಾಡದಂತೆ ನಿರ್ದೇಶಿಸಿದೆ.
86 ವಯಸ್ಸಿನ ಅಸಾರಾಂ ಅವರು ಹೃದಯ ಸಂಬಂಧಿ ಕಾಯಿಲೆಯ ಜೊತೆಗೆ ವಿವಿಧ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2023 ರಲ್ಲಿ ಗಾಂಧಿನಗರ ನ್ಯಾಯಾಲಯವು ತನಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅಸಾರಾಂ ಮಾಡಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು.
ವೈದ್ಯಕೀಯ ಆಧಾರದ ಮೇಲೆ ಮಾತ್ರ ಈ ವಿಚಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅಸಾರಾಂ ಮಾಡಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಆಗಸ್ಟ್ 29, 2024 ರಂದು ತಿರಸ್ಕರಿಸಿತ್ತು ಎನ್ನಲಾಗಿದೆ.