ರಾಯಚೂರು : ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 430ನೇ ಜನ್ಮದಿನವನ್ನು ಇಂದು ಮಂತ್ರಾಲಯದಲ್ಲಿ ವರ್ಧಂತಿ ಉತ್ಸವವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕಳೆದ 6 ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಗುರುವೈಭವೋತ್ಸವಕ್ಕೆ ಇಂದು (ಗುರುವಾರ) ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ತೆರೆ ಬೀಳಲಿದೆ. ಚೆನ್ನೈ ಶ್ರೀರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್‌ನ ನೂರಾರು ಕಲಾವಿದರಿಂದ ನಾದಹಾರ ಸಮರ್ಪಣಾ ಸೇವೆ ನಡೆಯಿತು. ಕಳೆದ 20 ವರ್ಷಗಳಿಂದ ನಾದಹಾರ ಸಮರ್ಪಣಾ ಸೇವೆ ನಡೆಯುತ್ತಿದೆ.
ಗುರುರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನ ಪ್ರತಿ ವರ್ಷದಂತೆ ಈ ವರ್ಷವೂ ಮಂತ್ರಾಲಯದಲ್ಲಿ ಗುರುವೈಭವೋತ್ಸವವಾಗಿ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಗುರುವೈಭವೋತ್ಸವ ಹಿನ್ನೆಲೆ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಿತು.
ಉತ್ಸವ ಮೂರ್ತಿ ಪ್ರಹ್ಲಾದ ರಾಜರನ್ನ ಚಿನ್ನದ ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು. ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಿರುವ ಭಕ್ತರು ಶ್ರೀ ಗುರುರಾಯರ ದರ್ಶನ ಪಡೆಯುತ್ತಿದ್ದಾರೆ.