‘ಪುಷ್ಪ 2’ ಸಿನಿಮಾ ಪ್ರದರ್ಶನ ಆಗುವಾಗ ಮಹಿಳೆಯೊಬ್ಬರು ಕಾಲ್ತುಳಿತದಿಂದ ನಿಧನರಾದ ಕಾರಣ ಆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ನಟನ ಬಂಧನಕ್ಕೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಸರ್ಕಾರ ಮತ್ತು ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಇಂದು ಸಂಧಾನ ಸಭೆ ಮಾಡಲಾಗಿದೆ. ಈ ಮೀಟಿಂಗ್ನಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಚಿತ್ರರಂಗಕ್ಕೆ ಒಂದಷ್ಟು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸರಷ್ಟೇ ಸೆಲೆಬ್ರಿಟಿಗಳಿಗೂ ಇರಬೇಕು. ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ರೇವತಿ ಎಂಬ ಅಭಿಮಾನಿಯು ಕಾಲ್ತುಳಿತದಿಂದ ಮೃತರಾದರು. ಇಂಥ ಸಂದರ್ಭಗಳಲ್ಲಿ ಶಾಂತಿ ಕಾಪಾಡಲು ಸೆಲೆಬ್ರಿಟಿಗಳು ಪೊಲೀಸರಿಗೆ ನೆರವು ನೀಡಬೇಕು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಸಿನಿಮಾಗಳ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿದಾಗ ಇಂಥ ದುರ್ಘಟನೆಗಳು ನಡೆಯುತ್ತವೆ. ಹಾಗಾಗಿ ಸದ್ಯಕ್ಕೆ ಎಲ್ಲ ರೀತಿಯ ಸ್ಪೆಷಲ್ ಶೋಗಳನ್ನು ನಿಷೇಧಿಸಲಾಗಿದೆ. ಅಲ್ಲದೇ, ಸೆಲೆಬ್ರಿಟಿಗಳು ತಮ್ಮ ಸ್ವಂತ ಬೌನ್ಸರ್ಗಳನ್ನು ನೇಮಿಸಿಕೊಂಡಾಗ ಬೌನ್ಸರ್ಗಳು ಜನರೊಂದಿಗೆ ಅಪಾಯಕಾರಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ಕೂಡ ರೇವಂತ್ ರೆಡ್ಡಿ ಅವರು ಎಚ್ಚರಿಗೆ ನೀಡಿದ್ದಾರೆ.