ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಂದ ಹೆಸರುವಾಸಿಯಾದ ನಟ ರಿಷಿ ಇದೀಗ ತಮ್ಮ ಮುಂಬರುವ ಚಿತ್ರ ‘ರುದ್ರ ಗರುಡ ಪುರಾಣ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೆಎಸ್ ನಂದೀಶ್ ನಿರ್ದೇಶನದ ಈ ಚಿತ್ರವು 1955 ರಲ್ಲಿ ಇದ್ದಕ್ಕಿಂದ್ದಂತೆ ಕಣ್ಮರೆಯಾಗಿ, ಮೂರು ದಶಕಗಳ ನಂತರ ಮತ್ತೆ ಕಾಣಿಸಿಕೊಂಡ Pan Am Flight 914 ನಿಂದ ಸ್ಫೂರ್ತಿ ಪಡೆದಿದೆ. 17A ಕಾವೇರಿ ಎಕ್ಸ್‌ಪ್ರೆಸ್ ಬಸ್ ಈ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜನವರಿ 24ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರತಂಡ ಇದೀಗ ‘ಹುಕ್ಕಾ ಎಲ್ಲಿ ಸುಕ್ಕಾ ಹೊಡಿ’ ಹಾಡನ್ನು ಬಿಡುಗಡೆ ಮಾಡಿದೆ. ನವೀನ್ ಸಜ್ಜು ಹಾಡಿರುವ ಈ ಟ್ರ್ಯಾಕ್ ಸದ್ಯದ ರಾಜಕೀಯ ವ್ಯವಸ್ಥೆಯನ್ನು ಅಣಕಿಸುತ್ತದೆ. ‘ಉಚಿತ ಅಕ್ಕಿ ಕೊಟ್ಟಿಲ್ವಾ, ಉಚಿತ ಬಸ್ ಬಿಟ್ಟಿಲ್ವಾ. ಕೊಟ್ಟು ತಗೋಳೋ ಆಟ ಗೊತ್ತಿಲ್ವಾ’ ಎಂಬ ಸಾಹಿತ್ಯ ರಾಜಕೀಯ ನಾಯಕರ ಆಟಗಳನ್ನು ಪ್ರತಿಬಿಂಬಿಸುತ್ತದೆ. ರಾಜಕೀಯವನ್ನು ಆಧ್ಯಾತ್ಮಿಕತೆಯೊಂದಿಗೆ ಬೆರೆಸುವ ಈ ಹಾಡನ್ನು ಮಂಜು ಮಾಂಡವ್ಯ ಬರೆದಿದ್ದಾರೆ.
‘ರುದ್ರ ಗರುಡ ಪುರಾಣ ಚಿತ್ರತಂಡ ವಾತ್ಸವಕ್ಕೆ ಹತ್ತಿರವಾಗಿರುವ ಹಾಡನ್ನು ಹುಡುಕುತ್ತಿದ್ದರು, ಹೀಗಾಗಿ ನಾವು ರಾಜ್ಯದ ರಾಜಕೀಯ ಸ್ಥಿತಿಯನ್ನು ವಿವರಿಸಲು ಮುಂದಾದೆವು. ಬಹಳ ಎಚ್ಚರಿಕೆಯಿಂದ ಆ ಹಾಡನ್ನು ಮಾಡಿದ್ದೇವೆ. ಈ ಹಾಡು ಜಗತ್ತು ಎಷ್ಟು ಚಿಕ್ಕದಾಗಿದೆ ಮತ್ತು ರಾಜಕಾರಣಿಗಳು ಹೇಗೆ ಲಾಭ ಪಡೆಯುತ್ತಾರೆ ಎಂಬುದನ್ನು ತಿಳಿಸುತ್ತದೆ’ ಎನ್ನುತ್ತಾರೆ ಮಂಜು ಮಾಂಡವ್ಯ. ಸಂಗೀತ ಸಂಯೋಜನೆಯನ್ನು ಕೆಪಿ ಮಾಡಿದ್ದಾರೆ. ಅಶ್ವಿನಿ ಆರ್ಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ.
ಅಶ್ವಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಲೋಹಿತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕರು ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಛಾಯಾಗ್ರಹಣವನ್ನು ಸಂದೀಪ್ ಕುಮಾರ್ ಮತ್ತು ಸಂಕಲನವನ್ನು ಮನು ಶೇಡ್ಗಾರ್ ನಿಭಾಯಿಸಿದ್ದಾರೆ.
ರುದ್ರ ಗರುಡ ಪುರಾಣದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ನಟಿಸಿದರೆ, ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಇತರ ತಾರಾಗಣದಲ್ಲಿ ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆಆರ್ ಪೇಟ್, ಗಿರಿ, ರಿದ್ವಿ, ಎಸ್ ಶ್ರೀರಾಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕಾಶ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಮತ್ತು ಹಾಸ್ಯ ಕಲಾವಿದರಾದ ಜಗ್ಗಪ್ಪ, ಪ್ರಸನ್ನ ಹಂಡ್ರಂಗಿ ಮತ್ತು ಪ್ರಭಾಕರ ಬೋರೇಗೌಡ ನಟಿಸಿದ್ದಾರೆ.