ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಿದ ಟೀಂ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಸೇರಿದಂತೆ ಗಣ್ಯರು, ಫ್ಯಾನ್ಸ್‌ ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆದಿದ್ದು, ಪಾಕ್ ವಿರುದ್ಧ ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಭಾರತ 45 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 244 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಅಲ್ಲದೆ ಈ ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ ಎಂದು ಅಮಿತ್‌ ಶಾ ಹಾರೈಸುತ್ತಾ ಎಕ್ಸ್‌ ಖಾತೆಯ ಮೂಲಕ ತಿಳಿಸಿದ್ದಾರೆ.

ಭಾರತ ತಂಡ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ. ಚಾಂಪಿಯನ್ ಟ್ರೋಫಿ ಪಂದ್ಯಾಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಇಂದಿನ ಅಭೂತಪೂರ್ವ ಗೆಲುವನ್ನು ನೋಡಿ ಆನಂದಿಸಿದೆ. ಭಾರತದ ಲಯಬದ್ಧ ಬೌಲಿಂಗ್, ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್, ತಂಡದ ಸಂಘಟಿತ ಹೋರಾಟ ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜಯದ ನಗೆ ಬೀರಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಮ್ಮವರ ಈ ಗೆಲುವಿನ ಓಟ ಪಂದ್ಯಾವಳಿಯುದ್ದಕ್ಕೂ ಹೀಗೆಯೇ ಮುಂದುವರೆಯಲಿ, ಭಾರತ ಚಾಂಪಿಯನ್ ಆಗಿ ಹೊರಹೊಮ್ಮಲಿ‌ ಎಂದು ಹಾರೈಸಿದ್ದಾರೆ.

ಶಹಬ್ಬಾಶ್ ಹುಡುಗ್ರಾ! ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು. ಇದು ಇಡೀ ದೇಶವೇ ಹೆಮ್ಮೆಪಡುವ ಗೆಲುವಾಗಿದೆ. ವಿರಾಟ್ ಕೊಹ್ಲಿ ಅವರ ಶತಕದಾಟ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ರೋಮಾಂಚಕ ಅನುಭವ ನೀಡಿತು. ಜೈಹೋ ಟೀಂ ಇಂಡಿಯಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದಿಸಿದ್ದಾರೆ.

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಗಳಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು.

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಶ್ರೇಷ್ಠ ಪ್ರದರ್ಶನ ನೀಡಿದ ಎಲ್ಲಾ ಆಟಗಾರರು ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದು, ನಮ್ಮ ಹೆಮ್ಮೆಯ ಕ್ಷಣಗಳಿಗೆ ಕಾರಣರಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸುತ್ತಿದ್ದಂತೆ ಭಾರತದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರಿಕೆಟ್ ಪ್ರೇಮಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *