ಅಮರಾವತಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೆಡೆಕ್ಸ್)ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ವಿಶ್ವದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಪೈಕಿ ಭಾರತ ತನ್ನದೇ ಚರಿತ್ರೆ ಬರೆಯಲು ಮೊದಲ ಹೆಜ್ಜೆ ಇಟ್ಟಿದೆ. ಸೋಮವಾರ ರಾತ್ರಿ ಸರಿಯಾಗಿ 10 ಗಂಟೆ ವೇಳೆಗೆ PSLV-ಸಿ60 ರಾಕೆಟ್ ನಭಕ್ಕೆ ಚಿಮ್ಮಿದೆ. ಹೊಸ ವರ್ಷ ಸ್ವಾಗತಿಸುವ ಈ ಸಂದರ್ಭದಲ್ಲಿ ಇಸ್ರೋ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಇಸ್ರೋ ಐತಿಹಾಸಿಕ ಸಾಧನೆಯ PSLV-ಸಿ60 ರಾಕೆಟ್ ಉಡಾವಣೆಯನ್ನು ರಾತ್ರಿ 9.58ಕ್ಕೆ ನಿಗಧಿಪಡಿಸಲಾಗಿತ್ತು. ಆದರೆ ಅಂತರಿಕ್ಷದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಗುರುತಿಸಿದ ಇಸ್ರೋ, ಸಮಯವನ್ನು ಬದಲಾವಣೆ ಮಾಡಿತು. 9.58ರ ಬದಲು ರಾತ್ರಿ 10 ಗಂಟೆಗೆ ಉಪಗ್ರಹವನ್ನು ಉಡಾವಣೆ ಮಾಡಿತು. ಈ ಸಂದರ್ಭದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಇಸ್ರೋ ಅಧ್ಯಕ್ಷರು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಹಾಜರಿದ್ದರು.
ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್ (Docking) ಮತ್ತು ಅನ್‌ಡಾಕಿಂಗ್ (Undocking) ಪ್ರಯೋಗ ಯಶಸ್ವಿಯಾದಲ್ಲಿ ಸ್ಪೇಡೆಕ್ಸ್‌ನಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ.
ಈ ಪ್ರಯೋಗದ ಭಾಗವಾಗಿ ಎಸ್‌ಡಿಎಕ್ಸ್01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್ ಇಂದು ಉಡಾವಣೆ ಮಾಡಲಾಗಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್ ಪ್ರಯೋಗ ನಡೆಯಲಿದೆ.