ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರು ಬೆಳಗಾಳಿಯಲ್ಲೇ ವಾಸ್ತವ್ಯ ಹೂಡಿದ್ದರೂ ಸಚಿವ ಸತೀಶ್ ಜಾರಕಿಹೊಳಿಯವರು ಭೇಟಿ ಮಾಡದಿರುವುದು ಹಲವರಿಗೆ ಪ್ರಶ್ನೆಗಳನ್ನು ಮೂಡುವಂತಾಗಿದೆ.
ಈ ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ಸತೀಶ್ ಅವರು ಡಿಕೆ.ಶಿವಕುಮಾರ್ ಅವರ ಭೇಟಿಯನ್ನು ನಿಯಂತ್ರಿಸುತ್ತಿದ್ದು, ಈ ಮೂಲಕ ಮುನಿಸು ಹೊರಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕರು ದುಬೈ ಪ್ರವಾಸಕ್ಕೆ ಯೋಜನೆ ರೂಪಿಸಿದ್ದು, 4-5 ದಿನಗಳ ಕಾಲ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ.
ಇನ್ನು ಬೆಳಗಾವಿಗೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್, ತಾವು ವಾಸ್ತವ್ಯ ಹೂಡಿದ್ದ ಸರ್ಕಾರಿ ಪ್ರವಾಸಿ ಮಂದಿರದಿಂದ ನೇರವಾಗಿ ಶಹಾಪುರದ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ, ವಿವಿಧ ಧಾರ್ಮಿಕ ವಿಧಿವಿಧಾನ ಕೈಗೊಂಡರು. 101 ಲೀಟರ್ ಹಾಲು ಬಳಸಿ, ಶಿವಲಿಂಗಕ್ಕೆ ಅಭಿಷೇಕ ಮಾಡಿದರು.
ಬಳಿಕ ಮಾತನಾಡಿದ ಅವರು, ನಾನೊಬ್ಬ ದೈವ ಭಕ್ತ. ಪೂಜೆ ಮಾಡಿ, ದೈವಶಕ್ತಿ ನೆನಪಿಸಿಕೊಂಡೇ ಮನೆಯಿಂದ ಹೊರ ಬರುತ್ತೇನೆ. ಹಾಗಾಗಿ ದೇವಸ್ಥಾನಕ್ಕೆ ಬಂದಿದ್ದೇನೆ. ನಿಮ್ಮಿಂದ ರಕ್ಷಣೆ ಬೇಕಪ್ಪ’ ಎಂದು ಹೇಳುವ ಮೂಲಕ, ಪರೋಕ್ಷವಾಗಿ ಬೆಳಗಾವಿ ನಾಯಕರಿಂದ ರಕ್ಷಣೆ ಬೇಕು ಎಂದು ಹೇಳಿದರು.
ಮಹಾ ಕುಂಭಮೇಳ ಕುರಿತು ಮಾತನಾಡಿ, ನಾನು ಕೂಡ ಈ ಬಾರಿ ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಉತ್ತರಪ್ರದೇಶ ಸರ್ಕಾರದ ಹಿರಿಯ ಸಚಿವರು ನನಗೆ ಆಹ್ವಾನಿಸಿದ್ದಾರೆ. ಯಾವುದೇ ಧರ್ಮದವರು ಆಗಲಿ, ಎಲ್ಲರಿಗೂ ಒಂದೊಂದು ನಂಬಿಕೆ ಇರುತ್ತದೆ. ನಾನು ನನ್ನ ಕುಟುಂಬದೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಲಿದ್ದೇನೆ. ಆದರೆ, ಭೇಟಿಯ ನಿಖರವಾದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದರು.