ತಮಿಳುನಾಡು : ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 34 ಭಾರತೀಯ ಮೀನುಗಾರರನ್ನು ಒಳಗೊಂಡ ಮೂರು ಭಾರತೀಯ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ನಸುಕಿನಲ್ಲಿ ವಶಪಡಿಸಿಕೊಂಡಿದೆ.
ದೋಣಿಗಳು ಮತ್ತು ಬಂಧಿತ ಮೀನುಗಾರರನ್ನು ಶ್ರೀಲಂಕಾದ ದ್ವೀಪ ಪ್ರದೇಶ ಇರನತೀವುಗೆ ಕರೆದೊಯ್ಯಲಾಯಿತು. ನಂತರ, ಅವುಗಳನ್ನು ಕಾನೂನು ಕ್ರಮಗಳಿಗಾಗಿ ಕಿಲಿನೊಚ್ಚಿಯ ಸಹಾಯಕ ಮೀನುಗಾರಿಕೆ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ.
ಮೀನುಗಾರಿಕೆ ಇಲಾಖೆ ಪ್ರಕಾರ, ರಾಮೇಶ್ವರಂನಿಂದ 400 ಕ್ಕೂ ಹೆಚ್ಚು ದೋಣಿಗಳು ಶನಿವಾರ ಸಮುದ್ರಕ್ಕೆ ಇಳಿದಿದ್ದು, ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಮೇಲೆ ಭಾರತೀಯ ದೋಣಿಗಳು ಮೀನುಗಾರಿಕೆ ನಡೆಸುತ್ತಿದ್ದಾಗ ಕೆಲವು ದೋಣಿಗಳು ಶ್ರೀಲಂಕಾದ ನೀರನ್ನು ಪ್ರವೇಶಿಸಿವೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಉಲ್ಲಂಘನೆಗಾಗಿ 2025ರಲ್ಲಿ ಇಲ್ಲಿಯವರೆಗೂ 6 ಭಾರತೀಯ ಮೀನುಗಾರಿಕೆ ದೋಣಿಗಳನ್ನು ಶ್ರೀಲಂಕಾ ನೌಕಪಡೆ ವಶಕ್ಕೆ ಪಡೆದಿದ್ದು, 52 ಭಾರತೀಯ ಮೀನುಗಾರರನ್ನು ಬಂಧಿಸಿದೆ.
ನಿರಂತರವಾಗಿ ಬಂಧಿಸುತ್ತಿರುವುದನ್ನು ಮೀನುಗಾರರ ಸಂಘ ಖಂಡಿಸಿದ್ದು, ಯಾವುದೇ ದಂಡ ಇಲ್ಲದೆ ಮೀನುಗಾರರ ಬಿಡುಗಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ವಶಕ್ಕೆ ಪಡೆಯಲಾದ ಬೋಟ್ ಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.