ಬಳ್ಳಾರಿ : ಶಾಸಕ ಜನಾರ್ದನ ರೆಡ್ಡಿನ ಜತೆಗಿನ ಮುನಿಸಿನಿಂದ ಸದ್ಯ ಕರ್ನಾಟಕ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ಹೆಚ್ಚು ಚರ್ಚಿತರಾಗಿರುವ ಶ್ರೀರಾಮುಲು ಇದನ್ನೇ ಮುಂದಿಟ್ಟುಕೊಂಡು ರಾಜ್ಯಸಭೆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ರಾಮುಲುಗೆ ಸದ್ಯ ಬಿಜೆಪಿಯಲ್ಲಿ ಯಾವುದೇ ಹುದ್ದೆ ಇಲ್ಲದೆ ಖಾಲಿ ಇದ್ದಾರೆ. ಇದೇ ಸಂದರ್ಭದಲ್ಲಿ ಹೈಕಮಾಂಡ್ನಿಂದ ಭೇಟಿಗೆ ಕರೆ ಬಂದಿದ್ದು, ರಾಜ್ಯಸಭೆ ಸ್ಥಾನದ ಬಗ್ಗೆ ವರಿಷ್ಠರ ಭೇಟಿ ವೇಳೆ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಈಗಾಗಲೇ ಜನಾರ್ದ ರೆಡ್ಡಿ ಹಾಗೂ ಶ್ರೀರಾಮುಲು ಮುನಿಸನ್ನು ತಣ್ಣಗಾಗಿಸಲು ಹೈಕಮಾಂಡ್ನಿಂದ ಇಬ್ಬರಿಗೂ ಬುಲಾವ್ ಬಂದಿದೆ. ದೆಹಲಿ ಚುನಾವಣೆ ಮುಗಿದ ಬಳಿಕ ದೆಹಲಿಗೆ ಬರುವಂತೆ ಶ್ರೀರಾಮುಲುಗೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೆಡ್ಡಿ ಜತೆಗಿನ ಮುನಿಸನ್ನೇ ತಮಗೆ ಲಾಭ ಆಗುವ ರೀತಿ ಬಳಕೆ ಮಾಡಿಕೊಳ್ಳಲು ರಾಮುಲು ಯತ್ನಿಸಲಿದ್ದಾರೆ.
ರಾಜ್ಯಸಭೆ ಸದಸ್ಯನಾಗಿ ಅಯ್ಕೆ ಮಾಡುವಂತೆ ಶ್ರೀರಾಮುಲು ಹೈಕಮಾಂಡ್ ಭೇಟಿ ವೇಳೆ ಮನವಿ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಬೇಕು ಎಂದು ಅವರು ವರಿಷ್ಠರ ಬಳಿ ಅಹವಾಲು ತೋಡಿಕೊಳ್ಳುವ ನಿರೀಕ್ಷೆಯಿದೆ.
ಆಂಧ್ರ ಪ್ರದೇಶ ಕೋಟಾದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ವೈಎಸ್ಆರ್ಪಿ ವಿಜಯ ಸಾಯಿರೆಡ್ಡಿ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ ಸ್ಥಾನ ತೆರವಾಗಿದೆ. ಅವರ ಅವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಹೀಗಾಗಿ ಆಂಧ್ರ ಕೋಟಾದಡಿ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ರಾಮುಲು ಮನವಿ ಮಾಡಲಿದ್ದಾರೆ.
ಈ ಬಗ್ಗೆ ಈಗಾಗಲೇ ರಾಮುಲು ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ, ರಾಮುಲು ದೆಹಲಿ ಭೇಟಿ ವೇಳೆ ಮಹತ್ವದ ಬೇಡಿಕೆ ಇಡುವ ಸಾಧ್ಯತೆಯಿದೆ ಎನ್ನಲಾಗಿದೆ.