ನವದೆಹಲಿ : ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಕಾಲ್ತುಳಿತದಿಂದ ಕುಂಭಮೇಳಕ್ಕೆ ಹೊರಟಿದ್ದ 18 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರಲ್ಲಿ 11 ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ನವದೆಹಲಿ ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಅದಕ್ಕಾಗಿ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಮಯಕ್ಕೆ ಪ್ಲಾಟ್‌ಫಾರ್ಮ್ 14 ಮತ್ತು 15ಕ್ಕೆ ಪ್ರಯಾಗ್ ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿಗೆ ನುಗ್ಗಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ 18 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *