ಪ್ರಯಾಗ್ರಾಜ್ : ಮಹಾಕುಂಭಮೇಳದಲ್ಲಿ ಪಾಲ್ಗೊಂಡಿರುವ ಆಪಲ್ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪಾವೆಲ್ ಅಸ್ವಸ್ಥಗೊಂಡಿದ್ದಾರೆ. ಕಮಲಾ ಎಂದು ಹೆಸರು ಬದಲಿಸಿಕೊಂಡಿರುವ ಲಾರೆನ್ ಪಾವೆಲ್, ಹೊಸ ವಾತಾವರಣದ ಕಾರಣದಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ. ನಿರಂಜನ ಅಖಾಡದ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೈಲಾಸನಂದಗಿರಿ ಮಹಾರಾಜ್ ಪ್ರತಿಕ್ರಿಯಿಸಿ, ಈಗ ಅವರು ನನ್ನ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಕೆಲವು ಅಲರ್ಜಿಗಳಿವೆ. ಅವರು ಎಂದಿಗೂ ಇಷ್ಟೊಂದು ಜನದಟ್ಟಣೆಯ ಸ್ಥಳಕ್ಕೆ ಹೋಗಿರಲಿಲ್ಲ. ಚೇತರಿಕೆ ಬಳಿಕ ಅವರು ಅಮೃತಸ್ನಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಲಾರೆನ್ ಪಾವೆಲ್ ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ಪೂಜೆಯ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದರು. ಅವರು ಸನಾತನ ಧರ್ಮದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದರು.
ಪೊವೆಲ್ ಜಾಬ್ಸ್ ಅವರ ಆಧ್ಯಾತ್ಮಿಕತೆಯ ಅನ್ವೇಷಣೆಯು ಇಲ್ಲಿಗೆ ಕರೆತಂದಿದೆ. ಅಖಾರದಲ್ಲಿ ಅವರು ನಡೆದುಕೊಂಡ ರೀತಿ ಎಲ್ಲಾವನ್ನೂ ಸ್ಪಷ್ಪಪಡಿಸುತ್ತದೆ. ಆಕೆ ಅಹಂದಿಂದ ಮುಕ್ತವಾಗಿದ್ದು, ತನ್ನ ಗುರುವಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆಕೆಯ ಎಲ್ಲಾ ಪ್ರಶ್ನೆಗಳು ಸನಾತನ ಧರ್ಮದ ಸುತ್ತ ಸುತ್ತುತ್ತವೆ ಮತ್ತು ಸಿಗುವ ಉತ್ತರಗಳಲ್ಲಿ ಹೆಚ್ಚಿನ ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಳ್ಳುತ್ತಾಳೆ ಎಂದು ಹೇಳಿದರು.
ಪ್ರಯಾಗ್ರಾಜ್ ತ್ರಿವೇಣಿ ಸಂಗಮಕ್ಕೆ ತೆರಳುವ ಮೊದಲು ಲಾರೆನ್ ಪಾವೆಲ್ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಹಿಂತಿರುಗುವ ಮೊದಲು ಅವರು ಜನವರಿ 15 ರವರೆಗೆ ನಿರಂಜಿನಿ ಅಖಾರ ಶಿಬಿರದಲ್ಲಿ ಇರುತ್ತಾರೆ ಎಂದು ತಿಳಿದು ಬಂದಿದೆ.