ಬೆಳಗಾವಿ : ಸವದತ್ತಿ ಪ್ರದೇಶದ ಅಭಿವೃದ್ಧಿಗೆ 3 ಕೋಟಿ ರೂ.ಗಳ ಅನುದಾನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಸವದತ್ತಿಯಲ್ಲಿ ನಡೆದ ಜನಪರ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಸಾಕಷ್ಟು ದೊಡ್ಡ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಮೋದಿಯವರ ನೇತೃತ್ವದಲ್ಲಿ ಭಾರತವನ್ನು 2047ರ ಹೊತ್ತಿಗೆ ಆರ್ಥಿಕವಾಗಿ ಮುಂದುವರಿದ ಸದೃಢ ರಾಷ್ಟ್ರವನ್ನಾಗಿ ರೂಪಿಸಲು ಬೇಕಾದ ಎಲ್ಲಾ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು, ಬೈಪಾಸ್ ರಸ್ತೆಗಳು, ಬೆಳಗಾವಿ – ರಾಯಚೂರು 6 ಲೇನ್ ಎಕ್ಸ್ಪ್ರೆಸ್ ಹೆದ್ದಾರಿ ಹೀಗೆ ಯಾವುದೇ ಕೇಂದ್ರ ಸರ್ಕಾರಗಳು ಈವರೆಗೆ ತಾರದೆ ಇರುವಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದೆ.
ಕೇಂದ್ರ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸವದತ್ತಿ ಕ್ಷೇತ್ರ ಅಭಿವೃದ್ಧಿಗೆ ಮೂರು ಕೋಟಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಸವದತ್ತಿ ತಾಲೂಕಿನಲ್ಲಿ 44 ಗ್ರಾಮ ಪಂಚಾಯಿತಿಗಳಲ್ಲಿ 142 ಜನವಸತಿ ಪ್ರದೇಶಗಳ 70 ಸಾವಿರ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀಪಾದ ಸಬಾನಿಸ್ ಅವರು ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಅಭಿವೃದ್ಧಿ ಯೋಜನೆಯ ಅಧಿಕಾರಿ ಸುನೀತಾ ಪಾಟೀಲ್ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಮತ್ತು ‘ಮಾತೃ ವಂದನಾ’ ಉಪಕ್ರಮಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು, ಶೆಟ್ಟರ್ ಅವರು ‘ಏಕ್ ಪೆಡ್ ಮಾ ಕೆ ನಾಮ್’ ಉಪಕ್ರಮದಡಿಯಲ್ಲಿ ಕಾಲೇಜು ಆವರಣದಲ್ಲಿ ಮರದ ಸಸಿಯನ್ನು ನೆಟ್ಟರು. ವಿವಿಧ ಇಲಾಖೆಗಳಿಂದ ಸ್ಥಾಪಿಸಲಾದ ಪ್ರದರ್ಶನ ಮಳಿಗೆಗಳಿಗೂ ಅವರು ಭೇಟಿ ನೀಡಿದರು. ನಂತರ ಕೇಂದ್ರ ಸರ್ಕಾರದಲ್ಲಿ ನೋಂದಾಯಿತ ಕಲಾವಿದರ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.