ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಗೆ ಮಂಜೂರಾದ ಹಣವನ್ನು ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಗೃಹ ಕಚೇರಿ ಕೃಷ್ಣದಲ್ಲಿ ಎರಡೂವರೆ ಗಂಟೆ ಕಾಲ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸರಕಾರ ನಿಗಮಗಳಿಗೆ 446 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ಕೇವಲ 260 ಕೋಟಿ ರೂ.ಗಳನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಖರ್ಚು ಮಾಡಲಾಗಿದೆ. ಶೀಘ್ರದಲ್ಲೇ ಹಣಕಾಸು ವರ್ಷ ಮುಗಿಯಲಿದೆ. 2024-25 ನೇ ಸಾಲಿನಲ್ಲಿ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,377 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಇದುವರೆಗೆ 3,631 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಹಣ ಕೂಡ ಪೂರ್ತಿ ಖರ್ಚು ಮಾಡಿಲ್ಲ. ಜೊತೆಗೆ ಅಂಬೇಡ್ಕರ್ ನಿಗಮದಲ್ಲಿ 900 ಕೋಟಿ ರೂ., ಭೋವಿ ನಿಗಮದಲ್ಲಿ 107 ಕೋಟಿ ರೂ. ಸೇರಿ ಎಲ್ಲಾ ನಿಗಮಗಳಲ್ಲಿ ನೂರಾರು ಕೋಟಿ ಹಣ ಇದ್ದರೂ ಖರ್ಚು ಮಾಡಿಲ್ಲ. ಈ ಸಂಬಂಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆಗಳಿಗೆ ನೋಟಿಸ್ ನೀಡಿ, ಅಗತ್ಯ ಬಿದ್ದರೆ ಅಮಾನತು ಮಾಡಿ ಎಂದು ಖಡಕ್ ಸೂಚನೆ ನೀಡಿದರು.

ಮಾರ್ಚ್‌ ಅಂತ್ಯದವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ವರ್ಷದ ಅಂತ್ಯದವರೆಗೆ ವಿದ್ಯಾರ್ಥಿ ವೇತನ ಪಾವತಿಯನ್ನು ಬಾಕಿಯುಳಿಸಬಾರದು. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ಸೆಪ್ಟಂಬರ್‌ ಒಳಗಾಗಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್‌ ಅಂತ್ಯದ ಒಳಗಾಗಿ ಪಾವತಿಗೆ ಕ್ರಮ ಕೈಗೊಳ್ಳಬೇಕು.

ಆಧಾರ್‌ ಆಗದಿರುವ ಕಾರಣಕ್ಕೆ ವಿದ್ಯಾರ್ಥಿ ವೇತನದಲ್ಲಿ ವಿಳಂಬವಾಗಬಾರದು. ಎಲ್ಲಾ ವಿದ್ಯಾರ್ಥಿಗಳಿಗೆ ಆಧಾರ್‌ ಮಾಡಿಸಲು ಕ್ರಮ ಕೈಗೊಳ್ಳಬೇಕು. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನಕ್ಕೆ 164 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಕೇವಲ 105 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ 230 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ.

ಎಲ್ಲಾ ಹೋಬಳಿಗಳಲ್ಲಿ ವಸತಿ ಶಾಲೆಗಳ ಸ್ಥಾಪನೆ ಸರ್ಕಾರದ ಗುರಿಯಾಗಿದೆ. ಈ ವರ್ಷ 20 ಹೊಸ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 841 ವಸತಿ ಶಾಲೆಗಳು ಇವೆ. ಇನ್ನು 92 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಬೇಕಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *