ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಉಡಾವಣೆ ಮಾಡಿದ್ದ ಯಶಸ್ವಿ 100ನೇ ರಾಕೆಟ್‌ನಲ್ಲಿ ಭಾನುವಾರ ತಾಂತ್ರಿಕ ದೋಷ ಉಂಟಾಗಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವರದಿಯಾಗಿದೆ.

ಜನವರಿ 29ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ NVS-02 ನ್ಯಾವಿಗೇಷನ್‌ ಉಪಗ್ರಹ ಹೊತ್ತ GSLV-F15 ರಾಕೆಟ್‌ ನಭಕ್ಕೆ ಚಿಮ್ಮಿತ್ತು. ಇಂದು ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಉಪ್ರಗ್ರಹ ಉಡಾವಣೆಯ ಬಳಿಕ ಸೌರಫಲಕಗಳನ್ನು ಯಶಸ್ವಿಯಾಗಿ ನಿಯೋಜಿಸಲಾಗಿತ್ತು. ಅದ್ರೆ ಕಕ್ಷೆಗೆ ಏರಿಸಲು ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್‌ ಅನುಮತಿಸುವ ಕವಾಟಗಳು ತೆರಯದ ಕಾರಣ ಕಕ್ಷೆಯನ್ನು ಸುತ್ತುಗಳನ್ನು ಹೆಚ್ಚಿಸುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಮುಂದೆ ಗೊತ್ತುಪಡಿಸಿದ ನಿರ್ದಿಷ್ಟ ಕಕ್ಷೆಗೆ ಸೇರಿಸಬಹುದು ಅಥವಾ ತಾಂತ್ರಿಕ ಅಡಚಣೆ ಮುಂದುವರಿದರೆ ಕಾರ್ಯಾಚರಣೆ ಕೈಬಿಡಲೂಬಹುದು ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

2025ರ ಹೊಸ ವರ್ಷದಲ್ಲಿ ಇಸ್ರೋ ನಡೆಸಿದ ಯಶಸ್ವಿ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಇದು ಮೊದಲ ಹಾಗೂ ಇಸ್ರೋದ 100ನೇ ಯಶಸ್ವಿ ಉಡಾವಣೆಯಾಗಿದೆ.

NVS-02 ನ್ಯಾವಿಹೇಷನ್‌ ಉಪಗ್ರಹ : ಇಸ್ರೋ ಈ ಹಿಂದೆ ಅಂದರೆ ಮೇ 29, 2023ರಲ್ಲಿ ಎರಡನೇ ತಲೆಮಾರಿನ NVS-01 ನ್ಯಾವಿಗೇಷನ್‌ ಉಪಗ್ರಹವನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿತ್ತು. NVS-02 ನ್ಯಾವಿಗೇಷನ್‌ ಉಪಗ್ರಹವು ಇದರ ಮುಂದುವರೆದ ಭಾಗವಾಗಿದೆ. ಭೂಕಕ್ಷೆಯ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಕಾರ್ಯಾಚರಣೆ ನಡೆಸಲು ಕಕ್ಷೆಗೆ ಕಳುಹಿಸಲಾಗಿದೆ.

ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದ್ದು, ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT)ದ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತದ ಭೂಪ್ರದೇಶವನ್ನು ಮೀರಿ ಸುಮಾರು 1,500 ಕಿ.ಮೀ. ವ್ಯಾಪ್ತಿಯಲ್ಲಿ ಉಪಗ್ರಹವು ತನ್ನ ಸೇವೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ ಎಂಬುದು ವಿಶೇಷವಾಗಿದೆ.

Leave a Reply

Your email address will not be published. Required fields are marked *