![](https://news1karnataka24x7.com/wp-content/uploads/2023/06/29cef746eac1624dce2b266ef6fc215788b151d112d85e8b7b9e11706d9db888.webp)
Textbook Revision: ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಠ್ಯ ಹಿಂತೆಗೆತ.. ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆ ರದ್ದತಿಗೆ ಸಂಪುಟ ಒಪ್ಪಿಗೆ
ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಸದ್ಯ 6 ರಿಂದ 10ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿ ಕುರಿತಾದ ಪಾಠ ತೆಗೆಯಲು ತೀರ್ಮಾನಿಸಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್ಎಸ್ಎಸ್ ಮುಖಂಡ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಗುರುವಾರ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಸಲಹೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪಠ್ಯಪುಸ್ತಕಗಳು ಆಯಾ ಶಾಲಾ ಮಕ್ಕಳಿಗೆ ತಲುಪಿವೆ. ಅಲ್ಲದೆ, ಇದಕ್ಕೆ ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಹೀಗಾಗಿ ಮತ್ತೊಮ್ಮೆ ಪ್ರಿಂಟ್ ಮಾಡುವುದು ಕಷ್ಟವಾಗಿದೆ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಪಠ್ಯದಲ್ಲಿ ಯಾವುದನ್ನು ಉಳಿಸಿಕೊಳ್ಳಬುಹುದು ಎಂಬ ಬಗ್ಗೆ ನಿರ್ಧರಿಸಬಹುದು ಎಂದರು.
ಪರಿಷ್ಕರಣೆ ವೇಳೆ ಮಕ್ಕಳಿಗೆ ಅವಶ್ಯಕತೆ ಇಲ್ಲದ ಹಾಗೂ ತಪ್ಪು ತಿಳುವಳಿಕೆ ಮೂಡಿಸುವ ವಿಚಾರಗಳನ್ನು ತೆಗೆಯಲಾಗಿದೆ. ಇದಕ್ಕಾಗಿ ಕೇವಲ 5 ಜನರ ಸಮಿತಿ ಮಾಡಲಾಗಿತ್ತು. ಪರಿಷ್ಕರಣೆ ಸಮಿತಿಯಲ್ಲಿ ರಾಜಪ್ಪ ದಳವಾಯಿ, ರಾಜೇಶ್, ರವೀಶ್ ಕುಮಾರ್, ಪ್ರೊ. ಟಿ. ಆರ್ ಚಂದ್ರಶೇಖರ್ ಹಾಗೂ ಡಾ. ಅಶ್ವತ್ಥನಾರಾಯಣ ಸೇರಿದಂತೆ ಐವರು ಸದಸ್ಯರು ಇದ್ದರು. ಸಾಹಿತಿಗಳೆಲ್ಲ ಹೇಳಿದಾಗ ಈ ಹಿಂದಿನ ಪಠ್ಯದಲ್ಲಿದ್ದ ವಿಚಾರಗಳ ಕುರಿತಂತೆ 45 ಬದಲಾವಣೆಗಳನ್ನು ಮಾಡಲು ಯೋಚಿಸಲಾಗಿತ್ತು. ಪದಗಳು, ವಾಕ್ಯಗಳ ಬದಲಾವಣೆ ಹಾಗೂ ಚಾಪ್ಟರ್ ಬಗ್ಗೆ ಬದಲಾವಣೆ ಮಾಡುವ ಅಗತ್ಯವಿತ್ತು. ಆದರೆ ಪ್ರಿಂಟ್ ಆಗಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲು ತಾಂತ್ರಿಕವಾಗಿ ಸಮಸ್ಯೆ ಇದೆ. ಹೀಗಾಗಿ ಈ ಬಾರಿ 6 ರಿಂದ 10 ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಈ ಹಿಂದೆ ಇದ್ದ ಸಾವಿತ್ರಿ ಪುಲೆ ಅವರ ವಿಷಯವನ್ನು ತೆಗೆಯಲಾಗಿತ್ತು, ಅದನ್ನು ಮರಳಿ ಸೇರಿಸಲಾಗಿದೆ. ನೀ ಹೋದ ಮರುದಿನ ಅಂಬೇಡ್ಕರ್ ಅವರ ಬಗೆಗಿನ ಕವನ, ಮಗಳಿಗೆ ಬರೆದ ಪತ್ರ ಎಂಬ ನೆಹರೂ ಅವರದ್ದನ್ನೂ ಸಹ ಮರಳಿ ಸೇರಿಲಾಗುತ್ತಿದೆ. ಜೊತೆಗೆ, ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿ ಕುರಿತಾದ ಪಠ್ಯ ತೆಗೆದುಹಾಕಿದ್ದೇವೆ ಎಂದು ಇದೇ ವೇಳೆ ಸಚಿವರು ಹೇಳಿದರು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಮುಂದಿನ 10 ರಿಂದ 15 ದಿನಗಳಲ್ಲಿ ಹೊಸ ಸಮಿತಿಯನ್ನು ರಚಿಸಿ ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಿರುವ ಪಠ್ಯ ಮಾಡಲಾಗುವುದು. ಒಂದು ಒಳ್ಳೆಯ ಸಮಿತಿ ಬೇಗ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕರಿಗೆ ಬೋಧನಾ ಶೈಲಿಯ ಬಗ್ಗೆಯೂ ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು : ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ ತಿಳಿಸಿದರು. ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಹಕ್ಕು ಕಾಯ್ದೆಯ ಹಿಂದಿನ ತಿದ್ದುಪಡಿ ವಾಪಸ್ ಪಡೆದು, ಜುಲೈ 3ರಿಂದ ಆರಂಭವಾಗುವ ಅಧಿವೇಶನದಲ್ಲಿ ಬಿಲ್ ಮಂಡಿಸಲಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಇಟ್ಟುಕೊಂಡ ಉದ್ದೇಶ ಸಾಬೀತಾಗಿಲ್ಲ. ಎಪಿಎಂಸಿ ವಹಿವಾಟು 600 ಕೋಟಿಯಿಂದ ನೂರು ಕೋಟಿಗೆ ಬಂದಿದೆ. ಸಂಪುಟ ಸಭೆಯಲ್ಲಿ ಈ ಕಾನೂನು ಹಿಂಪಡೆಯಲು ಒಪ್ಪಿಗೆ ಪಡೆಯಲಾಗಿದೆ ಎಂದರು.