ಬೀದರ್ : ವಿಚಿತ್ರ ಯಂತ್ರೋಪಕರಣಗಳನ್ನು ಹೊತ್ತಿದ್ದ, ಏರ್ ಬಲೂನ್ವೊಂದು ಪತನವಾಗುವ ಮೂಲಕ ಸ್ಥಳೀಯ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದ ಘಟನೆ ಬೀದರ್ನಲ್ಲಿ ನಡೆದಿದೆ.
ತಾಂತ್ರಿಕ ಉಪಕರಣವನ್ನು ಒಳಗೊಂಡ ಈ ಏರ್ ಬಲೂನ್ವೊಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಿದ್ದಿದೆ. ತಾಂತ್ರಿಕ ಉಪಕರಣವನ್ನು ಒಳಗೊಂಡಿದ್ದ, ಈ ಏರ್ ಬಲೂನ್ ಅನ್ನು ನೋಡಿದ ಗ್ರಾಮಸ್ಥರು ಆತಂಕಕೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅದನ್ನು ಪರಿಶೀಲಿಸಿದ್ದು, ಈ ವೇಳೆ ಅದು ಹವಾಮಾನ ಅಧ್ಯಯನಕ್ಕಾಗಿ ಹೈದರಾಬಾದ್ನಿಂದ ಆಕಾಶಕ್ಕೆ ಹಾರಿಸಿದ್ದ ಏರ್ ಬಲೂನ್ (ಸ್ಯಾಟ್ ಲೈಟ್ ಪೇಲೋಡ್ ಬಲೂನ್) ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ತಾಂತ್ರಿಕ ಉಪಕರಣವನ್ನು ಒಳಗೊಂಡ ಈ ಏರ್ ಬಲೂನ್ ಅನ್ನು ಹೈದರಾಬಾದ್ ನ TIFR (Tata Institute of Fundamental Research) ಬಲೂನ್ ಕೇಂದ್ರದಿಂದ ಜ.17ರಂದು ರಾತ್ರಿ 10 ಗಂಟೆ ಸುಮಾರಿಗೆ ಹಾರಿ ಬಿಡಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ಏರ್ ಬಲೂನ್ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದೆ. ಇದನ್ನು ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಬಲೂನ್ ಕೇಂದ್ರ ಸರ್ಕಾರದ ಅಧ್ಯಯನದ ಅಡಿಯಲ್ಲಿ ಬರುವ ಸಂಶೋಧನಾ ಸ್ಯಾಟ್ ಲೈಟ್ ಪೇಲೋಡ್ ಆಗಿದೆ. ಇದರ ಕಾರ್ಯಾವಧಿ 6-7 ತಾಸು ಎಂದು ತಿಳಿದುಬಂದಿದೆ.
ಈ ನಡುವೆ ತಾಂತ್ರಿಕ ಅಂಶಗಳನ್ನು ಅಳವಡಿಸಿರುವ ಕಾರಣ ಹೈದರಾಬಾದ್ ಬಲೂನ್ ಕೇಂದ್ರದ ಅಧಿಕಾರಿಗಳು ಕೂಡ ಅದನ್ನು ಹಿಂಬಾಲಿಸಿಕೊಂಡು ಜಲಸಂಗಿ ಗ್ರಾಮಕ್ಕೆ ತಲುಪಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೆ ಯಂತ್ರದ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಇಂತಹ ಬಲೂನ್ ಗಳನ್ನು ವರ್ಷದಲ್ಲಿ ಎರಡು ಋತುಗಳಲ್ಲಿ ಹಾರಿಸಿ ಪರಿಸರದಲ್ಲಿನ ವಾತಾವರಣದ ಕುರಿತು ಪರೀಕ್ಷೆ ನಡೆಸುತ್ತವೆ ಎಂದು ಸ್ಥಳದಲ್ಲಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.