ವಾಷಿಂಗ್ಟನ್ : ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ರದ್ದುಗೊಂಡ ಭೀತಿ ಅಮೆರಿಕದಲ್ಲಿರುವ ವಲಸಿಗರಲ್ಲಿ ಹುಟ್ಟಿಕೊಂಡಿದೆ. ಕಾಯ್ದೆ ಜಾರಿಗೆ ಬರುವ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಆಸ್ಪತ್ರೆಗಳಿಗೆ ದಾಂಗುಡಿ ಇಟ್ಟಿದ್ದಾರೆ. ಇವರ ಪೈಕಿ ಅನೇಕ ಭಾರತೀಯರು ಇದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಫೆ.20 ರ ಒಳಗೆ ಸಿಸೇರಿಯನ್‌ ಮೂಲಕ ಹೆರಿಗೆಗಾಗಿ ಅಮೆರಿಕದ ಹೆರಿಗೆ ಆಸ್ಪತ್ರೆಗಳಿಗೆ ಗರ್ಭಿಣಿಯರು ಧಾವಿಸುತ್ತಿದ್ದಾರೆ. ಸುಮಾರು 20 ಭಾರತೀಯ ದಂಪತಿಗಳು ಸಿಸೇರಿಯನ್‌ಗೆ ಫೋನ್‌ ಕರೆ ಮಾಡಿದ್ದಾರೆಂದು ಭಾರತೀಯ ಮೂಲದ ಸ್ತ್ರೀರೋಗ ತಜ್ಞರೊಬ್ಬರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಜನ್ಮದತ್ತ ಪೌರತ್ವ ಫೆ.20 ರಂದು ರದ್ದುಗೊಳ್ಳಲಿದೆ. ಅಲ್ಲಿಂದಾಚೆಗೆ ಹೊಸ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಟ್ರಂಪ್ ಸಹಿ ಮಾಡಿದ ಕಾರ್ಯಕಾರಿ ಆದೇಶಗಳಲ್ಲಿ ಒಂದು ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ಕೊನೆಗೊಳಿಸುವುದು. ಆದ್ದರಿಂದ, ಫೆ.19 ರವರೆಗೆ ಅಮೆರಿಕದ ನಾಗರಿಕರಲ್ಲದ ದಂಪತಿಗೆ ಜನಿಸಿದ ಮಕ್ಕಳು ಅಮೆರಿಕದ ಪ್ರಜೆಗಳಾಗುತ್ತಾರೆ. ನಂತರದ ದಿನಗಳಲ್ಲಿ ಜನಿಸುವ ಮಕ್ಕಳು ಅಮೆರಿಕದ ಪ್ರಜೆಯಾಗುವುದಿಲ್ಲ ಎಂದು ಅರ್ಥವಾಗಿದೆ.

ಅಮೆರಿಕದಲ್ಲಿ ತಾತ್ಕಾಲಿಕ H-1B ಮತ್ತು L1 ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಭಾರತೀಯರಿದ್ದಾರೆ. ಅವರು ಅಮೆರಿಕದಲ್ಲಿ ಶಾಶ್ವತ ನಿವಾಸವನ್ನು ನೀಡುವ ಗ್ರೀನ್ ಕಾರ್ಡ್‌ಗಳಿಗೂ ಕಾಯುತ್ತಿದ್ದಾರೆ. ಅಮೆರಿಕದ ನಾಗರಿಕರು ಅಥವಾ ಗ್ರೀನ್ ಕಾರ್ಡ್ ಹೊಂದದ ದಂಪತಿಗೆ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅಮೆರಿಕದ ನಾಗರಿಕರಾಗುವುದಿಲ್ಲ ಎಂಬುದು ಹೊಸ ಕಾಯ್ದೆಯಲ್ಲಿ ಅಡಕವಾಗಿದೆ.

ಹುಟ್ಟಿನಿಂದ ಸಿಗುವ ಪೌರತ್ವ ಎಂದರೇನು? – ಯಾರಾದರೂ ಅಮೆರಿಕದಲ್ಲಿ ಜನಿಸಿದರೆ ಅವರು ಅಮೆರಿಕದ ಪ್ರಜೆ. ಇಲ್ಲಿ ಪೋಷಕರ ವಲಸೆ ಸ್ಥಿತಿಗತಿಯನ್ನು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಪ್ರವಾಸಿ ವೀಸಾ ಅಥವಾ ಇನ್ಯಾವುದೇ ರೀತಿಯ ವೀಸಾ ಇರುವ ಭಾರತೀಯ ದಂಪತಿ ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿದರೆ, ಆ ಮಗು ಅಧಿಕೃತವಾಗಿ ಅಮೆರಿಕದ ಪ್ರಜೆಯಾಗುತ್ತಾರೆ.

Leave a Reply

Your email address will not be published. Required fields are marked *