ತಿರುವನಂತಪುರಂ : ಕೇರಳದ ಹಲವು ದೇವಾಲಯಗಳಲ್ಲಿ, ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಮೇಲಂಗಿ ತೆಗೆಯುವ ಸಂಪ್ರದಾಯ ನಿಲ್ಲಿಸಬೇಕು ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ. ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಬಳಿಕ ಮಾತನಾಡಿದ ಅವರು, ದೇವಾಲಯಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರಿಗೆ ಶರ್ಟ್ ತೆಗೆಯುವಂತೆ ಹೇಳುವುದು ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿದೆ. ಇದು ಸಾಮಾಜಿಕ ಅನಿಷ್ಟ, ಇದನ್ನು ತೆಗೆದು ಹಾಕಬೇಕಾಗಿದೆ. ದೇವಾಲಯಗಳಿಗೆ ಪ್ರವೇಶಿಸುವವರು ಪನೂಲ್ (ಜನಿವಾರ) ಧರಿಸುತ್ತಾರೆಯೇ ಎಂದು ಪರೀಕ್ಷಿಸಲು ಮೇಲಂಗಿ ತೆಗೆಯುವ ಅಭ್ಯಾಸ ರೂಢಿಯಾಯಿತು. ಆದರೆ ನಾರಾಯಣ ಗುರುಗಳಿಗೆ ಸಂಬಂಧಿಸಿದ ಸಂಸ್ಥೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ದೇಗುಲಗಳು ಇಂದಿಗೂ ಪುರುಷರಿಗೆ ಮೇಲಂಗಿ ಧರಿಸಿ ದೇಗುಲ ಪ್ರವೇಶವನ್ನು ನಿರ್ಬಂಧಿಸಿವೆ. ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಇದೇ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತನಾಡಿ, ಶ್ರೀಗಳ ಮಾತಿಗೆ ಬೆಂಬಲ ಸೂಚಿಸಿದ್ದು, ಸ್ವಾಮೀಜಿ ತಮ್ಮ ಮಾತಿನ ಮೂಲಕ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ್ದಾರೆ. ಅವರ ಸಲಹೆಗಳು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಗುರುವಿನ ಸಂಪ್ರದಾಯವನ್ನು ಎತ್ತಿ ಹಿಡಿಯುವ ಸಲಹೆಯನ್ನು ಸ್ವಾಮಿಗಳು ಮುಂದಿಟ್ಟಿದ್ದಾರೆ. ಯಾರನ್ನೂ ಒತ್ತಾಯಿಸುವ ಅಗತ್ಯವಿಲ್ಲ. ಕಾಲಕ್ಕೆ ತಕ್ಕಂತೆ ಅನೇಕ ಆಚರಣೆಗಳು ಬದಲಾಗಿವೆ.

Leave a Reply

Your email address will not be published. Required fields are marked *