ಬೆಳಗಾವಿ : ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿವಿಧ ರೀತಿಯ ಅಡುಗೆಗಳನ್ನು ಮಾಡಿಕೊಂಡು ಮಗಳಿಗೆ ಕೊಡಲು ಬಂದಿದ್ದ ಅತ್ತೆಯನ್ನು ಅಳಿಯನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತ ಮಹಿಳೆಯನ್ನು ಬೆಳಗಾವಿ ಕಲ್ಯಾಣ ನಗರದ ನಿವಾಸಿ 43 ವರ್ಷದ ರೇಣುಕಾ ಶ್ರೀಧರ ಪದಮುಕಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು 24 ವರ್ಷದ ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ ಎಂದು ತಿಳಿದುಬಂದಿದೆ.

ಆರೋಪಿ ಶುಭಂ 7 ತಿಂಗಳ ಹಿಂದಷ್ಟೇ ರೇಣುಕಾ ಪುತ್ರಿ ಛಾಯಾಳನ್ನು ವಿವಾಹವಾಗಿದ್ದನು. ಹೀಗಾಗಿ ರೇಣುಕಾ ಮಗಳಿಗೆ ಎಳ್ಳು ಬೆಲ್ಲದ ಜೊತೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಮಗಳ ಮನೆಗೆ ಬಂದಿದ್ದರು. ಆದರೆ ಈ ವೇಳೆ ಹಣ ಕೊಡಲಿಲ್ಲವೆಂದು ಶುಭಂ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಛಾಯಾ ಚಿಕಿತ್ಸೆಗೆ ಖರ್ಚಾಗಿದ್ದ, ಹಣ ನೀಡುವಂತೆ ಶುಭಂ ಕೇಳುತ್ತಿದ್ದನು. ಇಂದು ಮನೆಗೆ ಬಂದಾಗ ನೇರವಾಗಿಯೇ ಅತ್ತೆಗೆ ಹಣ ನೀಡುವಂತೆ ಕೇಳಿದ್ದಾನೆ. ಅದಕ್ಕೆ ರೇಣುಕಾ ಕೊಡಲ್ಲ ಎಂದು ಹೇಳಿದ್ದರಿಂದ ಶುಭಂ ಏಕಾಏಕಿ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ತೀವ್ರ ರಕ್ತ ಸ್ರಾವವಾಗಿ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಆರೋಪಿ ಶುಭಂ ಬಿರ್ಜೆ ಹಾಗೂ‌ ಆತನ ಪೋಷಕರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *