ಬೆಂಗಳೂರು : ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋ ಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆಕ್ಷೇಪಿಸಿದರು. ಸ್ಪೀಕರ್ ಅವರು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಖಂಡಿಸಿದರು.

ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಮೀಸಲಾತಿ ಕೊಟ್ಟ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಪ್ರಕಟಿಸಿದರು. ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಘೋಷಿಸಿದರು.

ನಮ್ಮ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದರ ನಡುವೆ ಮೀಸಲಾತಿ, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ಬದಲು 30 ಲಕ್ಷ ಕೊಡುವುದಾಗಿ ತಿಳಿಸುವುದು, ಮುಸ್ಲಿಂ ಹೆಣ್ಮಕ್ಕಳಿಗೆ ಆತ್ಮರಕ್ಷಣೆ ಕಲೆಗೆ ಸಂಬಂಧಿಸಿ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿರುವುದು ಸರಿಯೇ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ ಎಂದು ಕೇಳಿದರು. ಅವರಿಗೆ ಹೊರದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುವ ಕನಸುಗಳಿಲ್ಲವೇ? ರಾಜ್ಯ-ದೇಶದಲ್ಲಿ ಹಿಂದೂ ಹೆಣ್ಮಕ್ಕಳು ಲವ್ ಜಿಹಾದ್‍ಗೆ ಬಲಿ ಆಗುತ್ತಿದ್ದಾರೆ. ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ ಅಸಾಂವಿಧಾನಿಕ ಎಂದು ಟೀಕಿಸಿದರು. ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ವಿವರಿಸಿದರು.

ಈ ಸಂಬಂಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‍ಗಳ ತೀರ್ಪನ್ನೂ ಉಲ್ಲೇಖಿಸಿದರು. ಈ ತೀರ್ಪುಗಳು ನಮ್ಮ ಅನುಭವಿ ಮುಖ್ಯಮಂತ್ರಿಗಳಿಗೆ ತಿಳಿದಿದೆ. ಇದು ಸಂವಿಧಾನ ವಿರೋಧಿ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ-ಅವಮಾನ ಮಾಡುವ ನಿರ್ಧಾರ ಖಂಡಿತ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಸ್ಪೀಕರ್ ಅವರು ಯಾವ ಕಾರಣಕ್ಕಾಗಿ ನಮ್ಮ 18 ಶಾಸಕರನ್ನು ಅಮಾನತುಗೊಳಿಸುವ ನಿರ್ಧಾರ ಘೋಷಿಸಿದ್ದಾರೆ? ಎಂದ ಅವರು, ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರವು ಈ ರಾಜ್ಯದಲ್ಲಿರುವ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದೆ. ಬಜೆಟ್‍ನಲ್ಲೂ ಅಲ್ಪಸಂಖ್ಯಾತರ ಓಲೈಕೆ- ಹಿಂದೂಗಳನ್ನು ಅವಮಾನಿಸುವ ಅನೇಕ ಘೋಷಣೆ ಮಾಡಿದ್ದಾರೆ. ಹಿಂದೂ ವಿರೋಧಿ ನೀತಿಗಳನ್ನು ಸಿದ್ದರಾಮಯ್ಯನವರು ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ ಎಂದರು.

ಸ್ಪೀಕರ್ ಅವರು ನಮ್ಮ ರಕ್ಷಣೆಗೆ ಬರಬೇಕಿತ್ತು. 6 ತಿಂಗಳು 18 ಜನಪ್ರತಿನಿಧಿಗಳನ್ನು ಅಮಾನತು ಮಾಡುವ ಸ್ಪೀಕರ್ ಅವರ ನಡೆಯು ಸರಿಯಲ್ಲ. ಅಮಾನತಾದವರು ವಿಧಾನಸಭಾ ಲಾಬಿ, ಸಭಾಂಗಣ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಹಾಗಿದ್ದರೆ ಅವರು ಭಯೋತ್ಪಾದಕರೇ, ನಕ್ಸಲೈಟರೇ ಎಂದು ವಿಜಯೇಂದ್ರ ಪ್ರಶ್ನಿಸಿದರು. ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸುವ, ಹಕ್ಕು ಕಿತ್ತುಕೊಳ್ಳುವ ಕಾರ್ಯ ಎಂದು ಆಕ್ಷೇಪಿಸಿದರು.

Leave a Reply

Your email address will not be published. Required fields are marked *