ಬೆಂಗಳೂರು : ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಸ್ಫೋಟಕ ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಇದರ ಬಗ್ಗೆ ದೂರು ಕೊಡುತ್ತೇನೆ. ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಜೆಟ್ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.
ಕೆಲವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ಸಲುವಾಗಿ, ತಾವು ಮುಂದಿನ ಸಿಎಂ ಆಗಲು ಹನಿಟ್ರ‍್ಯಾಪ್ ಮಾಡ್ತಿದ್ದಾರೆ. ಈಗ ರಾಜಣ್ಣ ಮೇಲೆ ನಾಳೆ ಮತ್ತೊಬ್ಬರ ಮೇಲೆ ಆಗುತ್ತೆ ಅಂತ ಪ್ರಸ್ತಾಪಿಸಿದ್ರು. ಈ ವೇಳೆ ಎದ್ದು ನಿಂತ ಸಚಿವ ಕೆ.ಎನ್ ರಾಜಣ್ಣ, ಹನಿಟ್ರ‍್ಯಾಪ್ ಆರೋಪದ ಬಗ್ಗೆ ಸ್ಪಷ್ಟೀಕರಣ ಕೊಟ್ರು. ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಅಂತ ಮಾತು ಶುರು ಮಾಡಿದರು.
ಕರ್ನಾಟಕ ಸಿ.ಡಿ, ಪೆನ್‌ಡ್ರೈವ್‌ಗೆ ಫ್ಯಾಕ್ಟರಿ ಆಗಿದೆ ಅಂತ ಬಹಳ ಜನ ಹೇಳ್ತಾರೆ. ಬಹಳ ಗುರುತರ ಆರೋಪ ಇದು. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ‍್ಯಾಪ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಬರ್ತಿವೆ. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಮೇಲೂ ಸಿಡಿ, ಪೆನ್‌ಡ್ರೈವ್ ಇದೆ.
ಕೆಲವರು ಈಗಾಗಲೇ ಸ್ಟೇ ತಗೊಂಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತ ಆಗಿಲ್ಲ. ರಾಷ್ಟ್ರದ ಎಲ್ಲ ಪಕ್ಷಗಳ ಮುಖಂಡರ ಹನಿಟ್ರ‍್ಯಾಪ್ ಪೆನ್‌ಡ್ರೈವ್‌ಗಳಿವೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡ್ತೇನೆ. ಈ ದೂರು ಆಧರಿಸಿ ಪರಮೇಶ್ವರ್ ತನಿಖೆ ಮಾಡಿಸಲಿ. ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲ ಪ್ರೊಡ್ಯೂಸರ್‌ಗಳು, ಡೈರೆಕ್ಟರ್ ಗಳು ಇದ್ದಾರೆ ಅಂತ ಹೊರಗೆ ಬರಲಿ. ಜನಕ್ಕೆ ಗೊತ್ತಾಗಲಿ ಅಂತ ಒತ್ತಾಯಿಸಿದ್ರು.
ಸುಮಾರು 48 ಜನರ ವಿರುದ್ಧ ಸಿ.ಡಿ ಪೆನ್‌ಡ್ರೈವ್ ಮಾಡಲಾಗಿದೆ. ಇದೊಂದು ಪಿಡುಗು. ಸಾರ್ವಜನಿಕ ಜೀವನದಲ್ಲಿ ಇರೋರಿಗೆ ಗೌರವ ಬರಬೇಕು. ಹೀಗಾಗಿ ಲಿಖಿತ ದೂರು ಕೊಡ್ತೇನೆ. ಸೂಕ್ತ ತನಿಖೆ ಮಾಡಿಸಲಿ, ಇದರ ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗೆ ಬರಲಿ. ನನ್ನ ಮೇಲೂ ಹನಿಟ್ರ‍್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಪುರಾವೆ ಇಟ್ಕೊಂಡಿದ್ದೇನೆ. ಪರಮೇಶ್ವರ್ ವಿಶೇಷ ತನಿಖೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಅಂತ ಬಹಿರಂಗ ಮಾಡಲಿ ಅಂತ ಆಗ್ರಹಿಸಿದರು.