ಕೊಪ್ಪಳ : ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ, ಪ್ರಸ್ತಾವನೆ ತೆಗೆದುಕೊಂಡಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು. ಕೊಪ್ಪಳ ನಗರದಲ್ಲಿರುವ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಬಳಿಕ ಕುಷ್ಟಗಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳಲಾಗಿದೆ. ಕೊಪ್ಪಳ ಗಂಗಾವತಿ ಹಾಗೂ ಮುನಿರಾಬಾದ್ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ 13 ಕೋಟಿ ರೂ. ಹಣವನ್ನ ನೀಡಿದೆ. ಅದರ ಹೊರತಾಗಿ ಉಳಿದ ಹಣವನ್ನ ಕೇಂದ್ರ ಸರ್ಕಾರ ನೀಡಿದೆ. ಮೇಲ್ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ.
ಇನ್ನೂ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಯೋಜನೆಗೆ ಪ್ರಸ್ತಾವನೆ ತೆಗೆದುಕೊಂಡಿದ್ದೇನೆ, ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಬಳಿಕ ಅದನ್ನ ಪರೀಶಿಲನೆ ಮಾಡುತ್ತೇನೆ. ಅಮೃತ ಯೋಜನೆಯಲ್ಲಿ ರಾಜ್ಯದ 61 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಗದಗ-ವಾಡಿ ಹೊಸ ಲೈನ್ ಕಾಮಗಾರಿ ಆದಷ್ಟು ಬೇಗನೆ ಮುಗಿಸುತ್ತೇವೆ. ಮೇಲ್ಸೇತುವೆಗೆ ವ್ಯಕ್ತಿ ಹೆಸರು ಇಡುವ ನಿಯಮಗಳಿವೆ. ಅವೆಲ್ಲವುಗಳನ್ನು ಪಾಲನೆ ಮಾಡಬೇಕು. ರೈಲ್ವೆಯ ಟಿಕೆಟ್ ದರ ಶೇ.56ರಷ್ಟು ಕಡಿಮೆಯಿದೆ. ಗೂಡ್ಸ್ ರೈಲುಗಳ ಆದಾಯದಿಂದ ಟಿಕೆಟ್ ದರ ಹೊಂದಾಣಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.