ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮೂವರು ಸಾವನ್ನಪ್ಪಿದ್ದು ಸರಣಿ ಸಾವಿನಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಹೇಳಲಾಗಿದೆ.
ಬೇಲೂರು ಪಟ್ಟಣದ, ಜೆಪಿನಗರದಲ್ಲಿ ವಾಸವಾಗಿದ್ದ ಲೇಪಾಕ್ಷಿ (50) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗೃಹಿಣಿಯಾಗಿದ್ದ ಲೇಪಾಕ್ಷಿ ಬೆಳಿಗ್ಗೆ ಮನೆಯಲ್ಲಿದ್ದಾಗ ಸುಸ್ತು ಎಂದು ಹೇಳಿದ್ದರು. ಕೂಡಲೇ ಲೇಪಾಕ್ಷಿ ಅವರನ್ನು ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಹೃದಯಾಘಾತದಿಂದ ಲೇಪಾಕ್ಷಿ ಮೃತಪಟ್ಟಿದ್ದರು.
ಹೊಳೆನರಸೀಪುರದ ಮಹಿಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಮುತ್ತಯ್ಯ (58) ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣದ ನಿವಾಸಿಯಾಗಿದ್ದ ಮುತ್ತಯ್ಯ ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದರು. ಈ ವೇಳೆ ಬೈಪಾಸ್ ರಸ್ತೆಯಲ್ಲಿ ಟೀ ಕುಡಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ತಾಲ್ಲೂಕು ಆಸ್ಪತ್ರೆಗೆದಾಖಲಿಸಲಾಗಿತ್ತು. ಅಷ್ಟರಲ್ಲಿ ಮುತ್ತಯ್ಯ ಅವರ ಪ್ರಾಣಪಕ್ಷಿ ಹೋಗಿತ್ತು.
ಚನ್ನರಾಯಪಟ್ಟಣ ತಾಲ್ಲೂಕಿನ, ಕೆಂಬಾಳು ಗ್ರಾಮದ ಲೋಹಿತ್ ಅಲಿಯಾಸ್ ಪುಚ್ಚಿ (38) ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. 18 ವರ್ಷಗಳಿಂದ ಸೈನಿಕರಾಗಿ ದೇಶ ಸೇವೆ ಸಲ್ಲಿಸುತ್ತಿದ್ದ ಲೋಹಿತ್ ಜುಲೈ 3 ರಂದು ರಜೆ ಮುಗಿಸಿ ಕರ್ತವ್ಯಕ್ಕೆ ಮರಳಬೇಕಿತ್ತು. ಆದರೆ ಇಂದು ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. 7 ವರ್ಷದ ಹಿಂದೆ ಲೋಹಿತ್ ಅವರಿಗೆ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.