ತಿರುಪತಿ : ತಿರುಮಲ ತಿರುಪತಿ ದೇವಸ್ಥಾನದ ಬಜೆಟ್ 2025-26ರ ಆರ್ಥಿಕ ವರ್ಷಕ್ಕೆ 5,259 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.
ಟಿಟಿಡಿ ಟ್ರಸ್ಟ್‌ಗಳು ಈ ಬಜೆಟ್‌ನ್ನು ಅನುಮೋದಿಸಿವೆ. ಜೊತೆಗೆ, ‘ಪೋಟು’ (ದೇವಾಲಯದ ಅಡುಗೆಮನೆ) ಉದ್ಯೋಗಿಗಳ ವೇತನ ಹೆಚ್ಚಿಸುವುದನ್ನು, ವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಆಫ್‌ಲೈನ್ ದರ್ಶನ ವ್ಯವಸ್ಥೆಯನ್ನು ನೀಡುವಂತಹ ಪ್ರಮುಖ ನಿರ್ಧಾರಗಳನ್ನು ಸಹ ಮಂಡಳಿ ಅಂಗೀಕರಿಸಿದೆ.
‘ಪೋಟು’ ಕಾರ್ಮಿಕರ ಸಂಬಳವನ್ನು ಹೆಚ್ಚಿಸುವ ಮತ್ತು ಅವರ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಉತ್ತಮಗೊಳಿಸುವ ಕುರಿತು ಪರಿಶೀಲನೆ ನಡೆಸಲು ಮಂಡಳಿ ನಿರ್ಧರಿಸಿತು. ಇದಕ್ಕೆ ಜೊತೆಯಾಗಿಯೇ, ಕೊಡಂಗಲ್, ಕರೀಂನಗರ, ಉಪಮಾಕ, ಅನಕಪಲ್ಲಿ, ಕರ್ನೂಲ್, ಧರ್ಮಾವರಂ, ತಲಕೋಣ ಹಾಗೂ ತಿರುಪತಿ (ಗಂಗಮ್ಮ ದೇವಸ್ಥಾನ) ದೇವಾಲಯಗಳ ಪುನರ್ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಅನುಮೋದನೆ ನೀಡಲಾಗಿದೆ.
ಹಾಗೇ, ತಿರುಮಲದಲ್ಲಿ ಆಯ್ದ ವಿಐಪಿ ಮತ್ತು ವಿಐಪಿ ಅಲ್ಲದ ಅತಿಥಿ ಗೃಹಗಳನ್ನು ಪುನರ್ನಿರ್ಮಿಸಲು, ಅಲಿಪಿರಿಯಲ್ಲಿ ವಿಜ್ಞಾನ ನಗರ ಮತ್ತು ವಸ್ತುಸಂಗ್ರಹಾಲಯಕ್ಕಾಗಿ ಹಿಂದಿನ 20 ಎಕರೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ.