ದುಬೈ : ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ʻಎʼ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಇಂದು (ಭಾನುವಾರ) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ. ಹಾಗೆಯೇ ಮೊಹಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ.
ಬಾಂಗ್ಲಾದೇಶ ಎದುರು ಆರು ವಿಕೆಟ್ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದರೆ, ನ್ಯೂಜಿಲೆಂಡ್ ವಿರುದ್ಧ 60 ರನ್ಗಳಿಂದ ಸೋತಿರುವ ಪಾಕಿಸ್ತಾನ, ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಪಂದ್ಯ ತೀವ್ರ ಹೈವೋಲ್ಟೇಜ್ ಪಡೆಯುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆಯಿದೆ.
ಸದಾ ತೀವ್ರತೆಯನ್ನುಂಟು ಮಾಡುವ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ದುಬೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಶಾಂತತೆ ನೆಲೆಯೂರಿದೆ. ಕರಾಚಿಯಲ್ಲಿ ಕಿವೀಸ್ ವಿರುದ್ಧ ಸೋತ ನಂತರ ದುಬೈಗೆ ಆಗಮಿಸಿರುವ ಪಾಕ್, ಸ್ಥಳೀಯ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿದೆ.
ಬಾಂಗ್ಲಾದೇಶ ವಿರುದ್ಧ 41 ರನ್ ಗಳಿಸಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ, ಫಾರ್ಮ್ ಕಂಡುಕೊಂಡಿರುವುದನ್ನು ಬಿಂಬಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 8ನೇ ಶತಕ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭಗೊಳಿಸಿದ ಶುಭಮನ್ ಗಿಲ್, ಮತ್ತೊಂದು ಸೊಬಗಿನ ಆಟಕ್ಕೆ ಸಜ್ಜುಗೊಂಡಿದ್ದಾರೆ.
ಸದ್ಯಕ್ಕೆ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕುತೂಹಲ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.