ಬೆಂಗಳೂರು : ಬಾಯಿ ಚಪ್ಪರಿಸಿ ಸವಿಯುವ ಟೊಮೇಟೊ ಸಾಸ್ ಕೂಡ ಆರೋಗ್ಯಕ್ಕೆ ಮಾರಕವಾಗಿದೆ. ಹೌದು, ಇಡ್ಲಿ, ಬಟಾಣಿ ಬೆನ್ನಲ್ಲೇ ಟೊಮೇಟೊ ಸಾಸ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಆರೋಗ್ಯ ಇಲಾಖೆಯ ವರದಿಯಿಂದ ಧೃಡವಾಗಿದೆ.
ಆಹಾರ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಫೆಬ್ರವರಿಯಲ್ಲಿ ಟೊಮೇಟೊ ಸಾಸ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ತಪಾಸಣೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ಟೊಮೇಟೊ ಸಾಸ್ ಕಲಬೆರಕೆಯಿಂದ ಕೂಡಿದ್ದು, ಆರೋಗ್ಯಕ್ಕೆ ಮಾರಕವಾಗಿದೆ ಅಂಶ ಬಹಿರಂಗವಾಗಿದೆ. ಈ ಮೂಲಕ ಪುಟಾಣಿಗಳಿಂದ ದೊಡ್ಡವರವರೆಗೆ ಬಾಯಿ ಚಪ್ಪರಿಸಿ ಸವಿಯುವ ಟೊಮೇಟೊ ಸಾಸ್ ಆರೋಗ್ಯಕ್ಕೆ ಡೇಂಜರ್ ಆಗಿದೆ.
ಟೊಮೇಟೊ ಸಾಸ್ನಲ್ಲಿ ಅಪಾಯಕಾರಿ ರಾಸಾಯನಿಕ ಬಳಿಸಿರುವುದನ್ನು ಕಂಡು ಸ್ವತಃ ಆಹಾರ ಇಲಾಖೆ ತಜ್ಞರೇ ಕಳವಳಗೊಂಡಿದ್ದಾರೆ. ಟೊಮೇಟೊ ಸಾಸ್ನಲ್ಲಿ ಸೋಡಿಯಂ ಬೆಂಜೊಯೆಟ್ ಬಳಸಲಾಗುತ್ತಿದೆ. ಸೋಡಿಯಂ ಬೆಂಜೊಯೆಟ್ನಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಅಲ್ಲದೇ, ಟೊಮೇಟೊ ಸಾಸ್ ಬ್ರೈಟ್ ಹಾಗೂ ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂಬ ಅಂಶ ವರದಿಯಿಂದ ತಿಳಿದುಬಂದಿದೆ.
ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ. ಹೀಗಾಗಿ ಟೊಮೇಟೊ ಸಾಸ್ ಆರೋಗ್ಯಕ್ಕೆ ಮಾರಕವಾಗಿದೆ. ಕಲಬೆರಕೆ ಸಾಸ್ನಿಂದ ಮಕ್ಕಳು, ದೊಡ್ಡವರಲ್ಲಿ ಬಿಪಿ ಸಮಸ್ಯೆ ಕಾಡಬಹುದು. ಅಲ್ಲದೇ ನಿಶಕ್ತಿ ಉಂಟಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಶಾಂತಿ, ಮನಸ್ಥಿತಿ ಕಡಿಮೆಯಾಗುತ್ತದೆ. ಹೀಗಾಗಿ ಟೊಮೇಟೊ ಸಾಸ್ ಸಾಕಷ್ಟು ಅಪಾಯವಾಗಿದೆ.